Thursday, September 19, 2024

ಗಂಡು ಪ್ರಾಣಿಗಳು

ಯಾರಿಗೆ ಹೇಳೊದು ಗಂಡುಗಳ ಗೋಳು?
ಜಾರಲು ಬಾರದ, ದೂರಲೂ ಬಾರದ 
ದೂರದ ನಡಿಗೆಗೆ ಹಂಬಲಿಸುವ ಪ್ರಾಣಿಗಳು,
ದಾರದ ಮೇಲೆ ನಡಿಯವ ಪಯಣಿಗರಿವರೆಲ್ಲಾ॥

ಬರಿ ಇದು ಇಂದಿನದೂ ಅಲ್ಲ 
ಮುಂದೆ ಇರದೆ ಇರುವುದೇನೂ ಅಲ್ಲ
ತಂದು, ಪ್ರಕೃತಿ ನೀಡಿದ ಕೊಡುಗೆ ಇದೆಲ್ಲ
ಉಂಡು ಹೋಗಬೇಕು ಬಂದವರೆಲ್ಲಾ॥

ಗಂಡು ಪ್ರಾಣಿಗಳು ಕೆಂಡದಂತಿದ್ದರೇನು 
ಕಂಡು ಕಾಣದಂತಿರವ ದಂಡ ಪಿಂಡಗಳಿವರೆಲ್ಲ
ಉಂಡು ಹೋಗಲು ಬಂಡೆಯಾಗಿರಬೇಕು 
ಹೆಂಡತಿ ಮಾತು ಕೇಳಿದರೆ ಬೆಳಕಾಗುವರಿವರೆಲ್ಲಾ ॥

ದಂಡ ಕಟ್ಟಿ ಮಂಡಿಯೂರಬೇಕು
ಗುಂಡು ಕಲ್ಲಿನಂತಿದ್ದುರು ಪುಂಡತನವಿಲ್ಲ
ಪುಂಡಿಪಲ್ಲೆದಂತೆ ಹಿಚುಕಿದರೂ ,ಗಂಡುಗಳು
ರೊಟ್ಟಿ ಜೊತೆ ರುಚಿ ನೀಡಬೇಕು ಇವರೆಲ್ಲಾ !॥

ಹುಲಿ, ಬದುಕಲು ಇಲಿಯಂತಾಗಬೇಕು 
ಬಿಲ ತೋಡಿ ಅಡಗಬೇಕು,ಒಲೆ ಹತ್ತಿಸಿ
ಒಲವಿನ ಹಸಿವು ನೀಗಲು ಬೇಯಿಸುವ
ಅಡುಗೆಯ ಗಡಗಿಯಾಗಬೇಕು ಇವರೆಲ್ಲಾ॥

ಬಿಗಡಾಯಿಸಿ ಬಾಳು ತಗಡಾಗುವ ಮುನ್ನ 
ಬೇಯಿಸುವ ರೊಟ್ಟಿಯ ತೆವವಾಗುವುರು
ಸೀಗೆ ಕಾಯಂತೆ ಕೊಳೆ ತೊಳೆದರು 
ಹುಲಿಗಳು, ಎಳೆಯಂತೆ ಬಾಗಬೇಕಿವರೆಲ್ಲಾ॥
 


 





Thursday, September 5, 2024

ಗುರು

ಅರಿವಿನ ದಾರಿ ತೋರಿ,ಕರೆಯುವ 
ಗುರುವೆ ನಿಮಗೆ ನನ್ನ ಶರಣು।
ಅರಿಷಡ್ವರ್ಗ ತೊರೆಯುವಂತೆ ತೀಡಿ
ಗುರಿಯೆಡೆಗೆ ನಡೆಸುವ ನಿಮಗೆ ಶರಣು॥

ಪುಸ್ತಕದ ಜ್ಞಾನ ಮೀರಿ ಹೊತ್ತಿಸಿದೆ
ಮಸ್ತಕವನ್ನರಳಿಸುವ ಸತ್ಯದ ಬೋಧನೆ ।
ಗಸ್ತು ತಿರುಗಿದೆ ನೀ.. ನಾ ದಾರಿ ಬಿಡದಂತೆ
ಶಿಸ್ತಿನ ಜೀವನ ಕಲಿಸಿದ ಗುರುವೆ ಶರಣು॥

ಭೌತಿಕ ಸುಖದ ಬಲೆಯ ಹರಿದು
ನೀತಿಯ ಮಾರ್ಗ ಹಿಡಿದ ನೀ ಶರಣ।
ಜಾತಿ ಮೀರಿ ಮಾನವತ್ವದಲ್ಲಿ ಕುಳಿತು
ಮತಿ ನೀಡಿದ ಗುರುವೆ ನಿಮಗೆ ಶರಣು॥

ಮನಸ್ಸು ಅರಳಿಸಿ ಕನಸು ಕಟ್ಟಿಸಿ
ಧನುಸ್ಸು ಹಿಡಿಸಿ ತಮಸ್ಸಿನೊಡನೆ ಕದನ।
ಬಾಣ ಬಿರುಸು ಬೆಳಕಿನೊಡನೆ ಪಯಣ 
ಅನುದಿನ ಅನುರಣನ ನೀಡಿದಿರಿ ಜ್ಞಾನ ॥

 







ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...