Friday, December 31, 2021

* ಬಿದ್ದಿರುವೆನು ಇಲ್ಲಿ *

ಎಲ್ಲರಿಗೂ ಬೆಲ್ಲವಾಗುವುದು 
ಇಲ್ಲಿ ನನಗಾಗಲ್ಲ.ಆದವರೂ 
ಈ ಜಗದಲ್ಲಿ ಸುಖವಾಗಿ ಉಳಿದಿಲ್ಲ 
ಇದ್ದರೆ ಹೇಳಿ... ಅದು ಕಲ್ಲಾಗಿರಬೇಕು 
ಇಲ್ಲಾ ಮಣ್ಣಾಗಿರಬೇಕು 
ಇಲ್ಲಾಂದರ ಎಲ್ಲರ ಕೊಡಲಿಯ 
ಏಟು ತಿಂದ ಬಡಪಾಯಿ 
ಗಿಡವೆ ಆಗಿರಬೇಕು !
ಎಲ್ಲರಿಗೂ ಬೇಕಾಗಲೂ ಹೋದವರ 
ಪಟ್ಟಿ ದೊಡ್ಡದೆ ಇದೆ.. 
ಅದು ಒಂದೆ, ಎರಡೆ......
ನಡು ರಾತ್ರಿ ನಡೆದ ಬುದ್ಧನಿಗೆ 
ವಿಷ ನೀಡಿದರು.
ದೇವರ ಸಾಮ್ರಾಜ್ಯದಲ್ಲಿದ್ದ 
ಯೇಸುವನ್ನು ಕಳ್ಳರ ಮಧ್ಯ 
ಶಿಲುಬೆಗೆ ತಂದರು.
ಅರಬೆತ್ತಲೆ ಫಕೀರ ನಮ್ಮ ಗಾಂಧೀಜಿಗೆ 
ಆಗಿದ್ದಾದರೂ ಏನು ..?
ಆಹಾ ...ಎಂಥಾ ಪುಕ್ಕಲು
ಪರಮೇಶಿ ಇವಾ, ಅಂದಿರ ಬೇಕಲ್ಲಾ..!  
ಅಂದರೆ ಅನ್ನಿರಿ ನನ್ನ ದೇನು 
ತಕರಾರು ಇಲ್ಲ 
ನಾನು ಪುಕ್ಕಲನೆ...
ಬೆಲ್ಲ ವಾಗಲೂ ಬಿಡಲೊಲ್ಲರು 
ಮಡದಿ,ಪಡೆದ ಮಕ್ಕಳು ಹಡೆದ ಜನಕರು... 
ಅವರನ್ನು ಬಿಟ್ಟರೆ.. ! ಬಿಡಬಹುದೆ ಜಗವೆಲ್ಲ ? 
ಕಲ್ಲು ಹೊಡೆವರು ತಾನೆಲ್ಲಿದ್ದರೂ  
ತಿಳಿಯದವರಿಗೆ ಕಲ್ಲಾಗಿ 
ತಿಳಿದವರಿಗೆ ಬೆಲ್ಲವಾಗಿ 
ತಿದ್ದಿಕೊಳ್ಳುತ್ತಾ ಬಿದ್ದಿರುವೇನು 
ಬುದ್ಧ ಬಸವ ,ಗಾಂಧಿ ಯೇಸುವಿನ 
ಶುದ್ಧ ಪಥದಲ್ಲಿ

Monday, December 27, 2021

ವ್ಯವಸ್ಥೆಯ ನಗ್ನ ಸತ್ಯ

ವ್ಯವಸ್ಥೆಯ ಸಮಸ್ಯೆಯ 
ಬೇರನರಿಯದೆ ಬರಿ 
ದೂರಿ ಆಗದು ಪ್ರಯೋಜನ/ 
ಕಾರ್ಯಗತವಾಗದ 
ಯೋಜನೆಯೊ ಒಂದೆ 
ಅದು ಕತ್ತೆಯ ಮಾರ್ಜನ/
ಬರಿ ಹುತ್ತದ ನೆತ್ತಿಯ 
ಬಡಿದರೆ ಮೈ ನೋವು 
ಅನುದಿನ /
ಪತ್ಯೆಯಾಗಲಿ ನಿಜ ಕಾರಣ/
ಇದ್ದಾಗ ಬರದ ಜನ
ಸತ್ತ ಮೇಲೆ ಹೇಳುವರು 
ಅವರ ಪುಣ್ಯದ ಪುರಾಣ/ 
ಕೈತುಂಬಾ ಇದ್ದಾಗ ಹಣ 
ಮೆರೆಸುವರು ಬೀದಿ 
ಬೀದಿಗಳಲ್ಲಿ ಸನ್ಮಾನ 
ಬೀಗಿದರೆ ಮರಣ/
ಮರೆತರೆ ಆಗಲಾರೆ ಶರಣ/
ಉಚ್ಚ ನೀಚರೆಂಬುದು
ಸಚ್ಚಾರಿತ್ರ್ಯ ಹೊಂದಿರುವೆವು 
ಎನ್ನುವವರು ಪುರಾಣ /
ಬಚ್ಚಲ ನೀರಿಗೆ ಬಳದಿದೆ
ಪಚ್ಚೆಯ ತೋರಣ/
ಹುಚ್ಚರಂತೆ  ಹಣೆಬರಹ//

Sunday, December 19, 2021

ಬರುವೆ ಗುರುವೆ

ತೋರು ಗುರುವೆ ಸರಿ ದಾರಿ
ಬರುವೆ ನೀನಿರುವ ಗಿರಿಗೆ
ಇರಲಿ, ಇದ್ದರೂ ಬಹು ದೂರ 
ಗುರಿಯ ತಲುಪವ ಚಪಲ //

ಜಾರಿ ಬೀಳುವೆನೆಂಬ ಭಾವ  
ಸಾರಿ ಸಾರಿ ಹೇಳಿದರೇನು ?
ದಾರಿ ತೋರಿಸುವ ದಾನವ 
ಇರಲು, ಅಡೆ ತಡೆಗೇನು ಫಲ !//

ನೂರು ಜನ ನಡೆದ ಪಥಗಳು 
ಸಾವಿರ ಕಥೆಗಳ ಹೇಳುತಿವೆ
ಯಾವ ದಾರಿ ಹಿಡಿಯಲಿ 
ಗಿರಿಯ ಕಡೆಗೆ ನಡೆಯಲು//

ಪೂರ್ವದ್ದೊಂದು ಯೋಗ ದಾರಿ
ಪಶ್ಚಿಮದ್ದೊಂದು ಭೋಗ ದಾರಿ
ಸಿಗದೇ ಕುಳಿತೆ ಮಂಡಿಯೂರಿ
ಯಾವ ದಾರಿ ತುಳಿಯಲಿ //

ಸರಕಿನಂತೆ ಅಸನ ಕಬಳಿಸಿ
ಹರಕು ಬಾಯಿಗೆ ಗರಿಕೆ ಇಳಿಸಿ
ಮುರುಕು ಬಾಯಿಯ ಗೋಳು
ವ್ಯಸನವೆನ್ನದೆ ಏನು ಮಾಡಲಿ //

ತುಸುವೆ ತಿಂದರು ರಸ ಸುರಿಸುವ
ಕಸುವು ಗಳಿಸಿವ ಯೋಗ ಕಲಿಸು
ನಸುನಗುತ ಇರಲು ಕಲಿಸು 
ಹೊಸ ಮನುಷ್ಯನಾಗಿ ಬೆಳಸು//

ಅನುದಿನದ ವನ ಮಾತು ಮರೆಸು
ಪ್ರತಿ ದಿನವು  ಓದುವುದು ಕಲಿಸು
ಓದಿದ ಪುಟ ಅನುಸರಿಸಲು ಕಲಿಸು 
ಅರಿಯದೆ ಬರೆಯುವುದು ಬಿಡಿಸು //

                       ಬಸನಗೌಡ ಗೌಡರ

Wednesday, December 8, 2021

* ಬಾಗಬೇಕು ಇಲ್ಲಿ *

ಬಂದು ಹೋಗುವುದು 
ಬೆಂದು ನೊಂದು 
ಹೋಗಲು ಅಲ್ಲ// 

ಬೇಲ್ಲದಂತೆ ಸಹಕಾರ 
ಹರಡುವೆ 
ಬೆಳದಿಂಗಳಾಗಿ ಎಲ್ಲೆಲ್ಲೂ //

ನಾನೊಂದು ಚಂಡು 
ಯಾರ ಕಾಲಿಗೆ ತಾಗಿದರೇನು 
ಪುಟಿಯುವ ಕಾಲ್ಚಂಡು 
ಗೋಲಿಗಾಗಿ 
ಮಣಿಯ ಬೇಕು ಇಲ್ಲಿ//

ನಾನೊಂದು
ಹುಡುಗರಾಡುವ 
ಚಿನ್ನಿದಾಂಡು
ಯಾರು ಬಡಿದರೇನು
ಹಾರುವ ತುಂಡು 
ದೂರ ಅಳೆಯಬೇಕು 
ಸಾಗಿದಷ್ಟು ಇಲ್ಲಿ//

ನಾನೊಂದು 
ಶ್ರೀಗಂಧದ ಕೊರಡು
ಯಾರು ತೆಯಿದರೇನು 
ಚಂದನದ ತುಂಡು
ಸುವಾಸನೆಗೆ 
ಬಾಗಬೇಕು ಇಲ್ಲಿ//

ಸಾಲಾಗಿ ಸಾಗುವ 
ಇರುವೆಗೇನು ಗೊತ್ತು !
ನಾವೆಲ್ಲ ಗುರುಗಳೆಂದು 
ಕಿರಿಯರಾದರೇನು 
ಕಲಿಯವೆ 
ಮಗುವಾಗಿ ಇಲ್ಲಿ//

 ಬಸನಗೌಡ ಗೌಡರ

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...