Wednesday, June 28, 2023

ಬದುಕು ಬಂಡಿ

ಬದುಕು ಬಂಡಿ

ನಿನ್ನ ಮಂದಹಾಸದ 
ಮುಗುಳ್ನಗೆಯ ಮಾತಿಗೆ 
ಮೆತ್ತಗಾಗಿತ್ತೆನ್ನ ಹೃದಯ !
ಬಿತ್ತಿ ಭರವಸೆಯ ಬೀಜ 
ಎತ್ತ ಹೋದೆ ಗೆಳೆತಿ ,
ನೀನಿತ್ತ ಕನಸು ರೆಕ್ಕೆಗಳಾಗಿ ಬಲಿತು 
ಆಕಾಶದೆತ್ತರಕೆ ಹಾರಿ, 
ಬಾಲಕತ್ತರಿಸಿದ ಗಾಳಿ ಪಟವಿಂದು ।
ಗಿರ ಗಿರನೆ ತಿರುಗಿ ಧರೆಗೆ ಉರುಳಿ
ತಿರುಗಿದ ರಭಸಕ್ಕೆ ಮೈಯಲ್ಲಾ ಸುಸ್ತು ।
ನೀ ಬರುವ ದಾರಿ ಕಣ್ಣರಳಿಸಿ  
ನಡು ಹಗಲಾಗಿದೆ ಕತ್ತಲು। 
ಕುಣಿದರೆ ಮಯೂರಿ 
ಓಡಿದರೆ ಕುದುರೆ ಹಾಡಿದರೆ ಕೋಗಿಲೆ 
ಗಿಡವಾಗಿ ನಿಂತು ಜಡವಾದೆ ಇಂದು॥
ಬಡವನೇನಲ್ಲಾ ತುಂಬಿದ ಸ್ನೇಹದ ಕಡಲು
ಕಾಯ್ದಿರದು ಕರಿಮೋಡ 
ಪ್ರೀತಿಯ ತಂಪೆರೆದರೆ ಮಹಾಮಳೆ |
ಹರಿಯುವುದು ಭಾವ ಹೋಳೆಯಾಗಿ।
ಬೇಗುದಿಯ ಕೊಳಚೆ 
ತೇಲಿ ಹೋಗುವುದು ತೆಪ್ಪವಾಗಿ॥
ತಪ್ಪು ನಡೆದು ಉಪ್ಪರಿಗೆ ಸೇರಿ 
ಅಪ್ಪಚ್ಚಿ ಮಾಡಿದೆ ನನ್ನ 
ತಲೆಯಲ್ಲಾ ನೆರೆತು ನಿರಾಸೆಯು ಬಲಿತು 
ಬದುಕೆಂಬ ಬಂಡಿ ಸಾಗುತಿದೆ 
ಬರುಡಾಗಿ ಅನವರತ.॥

Monday, June 26, 2023

* ಗುರುವಂದನಾ ಕಾರ್ಯಕ್ರಮ *

Teachers  are social engineers "ಎನ್ನುವ ಮಾತೊಂದಿದೆ ,ಅದು ಅಷ್ಟೇ ಸತ್ಯವೂ ಕೂಡಾ ಹೌದು, ಸುಸ್ಥಿರ ಸಮಾಜ ಕಟ್ಟುವಲ್ಲಿ ಶಿಕ್ಷಕನ ಸ್ಥಾನವನ್ನು ಸರಿಗಟ್ಟುವ ಉದ್ಯೋಗ ಸಮಾಜದಲ್ಲಿ ಇನ್ನೊಂದಿಲ್ಲ ಆದರೆ ಅದನ್ನು ಶಿಕ್ಷಕರು ಉಳಿಸಿಕೊಂಡು ಹೋಗಬೇಕು ಅಷ್ಟೆ. ಬೇರೆ ಉದ್ಯೋಗಗಳಿಗೆ ಹೋಲಿಸಿ ನೋಡಿದರೆ ಅದು ಅರ್ಥವಾಗುತ್ತದೆ. ನಿವೃತ್ತಿಯಾದ ನಂತರವೂ ಶಿಕ್ಷಕರಿಗೆ ಸಿಗುವ ಗೌರವ ಗಟ್ಟಿಯಾಗಿ ಏರುತ್ತಿರುತ್ತದೆ.ಈ ಮಾತಿಗೆ ಪುಷ್ಪಿ ನೀಡುವ ಹಾಗೆ ನಿನ್ನೆ ಹಿರೇಹಾಳ ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮ ಒಂದು ತಾಜಾ ಉದಾಹರಣೆ.ಈಗ್ಗೆ ಎರಡು ಮೂರು ದಿನಗಳ ಹಿಂದೆ ನನಗೊಂದು ಪೋನ್ ಕಾಲ್ "ಆರಮ್ ಇದ್ದೀರಾ ಸರ್" ಎಂದ ವಿದ್ಯಾರ್ಥಿ. "ಖಂಡಿತವಾಗಿಯೂ ಆರಾಮ ಇದ್ದೀನಿ ತಾವು ಆರಾಮ ಇದ್ದೀರಾ ಸರ್, ಎಂದೆ.ಸರ್ ನಾನು ಭೀಮನಗೌಡ ಪಾಟೀಲ ತಮ್ಮ ವಿದ್ಯಾರ್ಥಿ ನಮ್ಮೂರಿನಲ್ಲಿ 2007-08 ಸಾಲಿನಲ್ಲಿ ಹತ್ತನೆಯ ವರ್ಗ ಓದಿದ ವಿದ್ಯಾರ್ಥಿಗಳು ಸೇರಿ ಗುರುವಂದನೆ ಕಾರ್ಯಕ್ರಮ ಇಟ್ಟುಕೊಂಡಿದ್ದವೆ ಬರಬೇಕು ಸರ್ ಎಂದ. 'ಖಂಡಿತವಾಗಿಯೂ ಬರುತ್ತೇನೆ   ಆದರೆ ಬಿಡುವು ಇರದಿದ್ದರೆ ಕಷ್ಟ ಎಂದೆ .ಅದಕ್ಕೆ ಆತ ಸರ್, ತಮಗೆ ಬಿಡುವಿಲ್ಲದ ಕೆಲಸ ಕಾರ್ಯಗಳು ಎಂದು ರವಿವಾರ ಇಟ್ಟುಕೊಂಡಿದ್ದೇವೆ ಬರಬೇಕು ಎಂದ. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಸೇರಿ ಮಾಡುವ ಗೌರವ ವಂದನೆಯಾದರೆ ಹೋಗದೆ ಇದ್ದರೂ ನಡೆಯುತ್ತದೆ ಎಂದೆನಿಸಿತ್ತು ಯಾಕೆಂದರೆ ಅಲ್ಲಿ ನಾನು ಪಿಯುಸಿ ಪಾಠ ಬೋಧನೆ ಮಾತ್ರ ಮಾಡಿದ್ದೆ. ಈಗ ಅಲ್ಲಿ ಪಿಯುಸಿ ವಿದ್ಯಾರ್ಥಿಗಳು ಕೊಡಿ ಮಾಡಿಲ್ಲವಲ್ಲ, ಔಪಚಾರಿಕವಾಗಿ ಕರೆದಿರಬಹುದು ಎಂದ ಭಾವಿಸಿದ್ದೆ. ಆದರೆ ಅಲ್ಲಿ 2007-08 ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳೆ ನಮ್ಮ ಪಿ.ಯು ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಎಂದು ಆಮೇಲೆ ಅರ್ಥವಾದದ್ದು ದಿನಾಂಕ  23 06 2023 ರಂದು ಮತ್ತೆ ಪೋನ್ ಕಾಲ ಸರ್ ತಾವು ಎಲ್ಲಿದ್ದೀರಿ ತಮಗೆ ಆಹ್ವಾನ ಪತ್ರಿಕೆ ನೀಡಲು ಬರುತ್ತಿದ್ದೇವೆ ಎನ್ನಬೇಕೆ ! ಈಗ ಬೇಡ ಎನ್ನಲೂ ಬಾರದ, ಬನ್ನಿ. ಎನ್ನಲೂ ಬಾರದ ಸನ್ನಿವೇಶ .ಏಕೆಂದರೆ ಸುಮಾರು 40 ಕಿ ಮೀ ದೂರದಿಂದ ಬರುತ್ತಿದ್ದಾರೆ ಎಂದರೆ ಅವರ ಪ್ರೀತಿಗೆ ತಲೆ ಬಾಗಲೆ ಬೇಕಾಗಿತ್ತು. ಔಪಚಾರಿಕವಾಗಿ ವಾಟ್ಸಪ್ ನಲ್ಲೆ ಹಾಕಿದ್ದರೆ ಬರುತ್ತಿದ್ದೆ ಎನ್ನುವುದಕ್ಕೂ ಮನಸ್ಸಾಗದೆ ಬಂದ ವಿದ್ಯಾರ್ಥಿಗಳಿಗೆ ಪ್ರೀತಿಯ ಅಭಯ ನೀಡಿ ಬೀಳ್ಕೊಟ್ಟೆ.  ಅಂದು ರವಿವಾರ ಬಸ್ ಪ್ರಯಾಣವೊ ? ಬೈಕು ಪ್ರಯಾಣವೊ ಗೂಡಾದೆ ಅಂತಿಮವಾಗಿ ಬೈಕ್ ನ್ನೆ ಆಯ್ಕೆ ಮಾಡಿಕೊಂಡು ಹಿರೇಹಾಳ ಮಾರ್ಗ ಹಿಡಿದೆ. ಕಾರಣವಿಷ್ಟೆ ಮುರುಡಿ ,ಹಾನಾಪೂರ. ನಂದಿಕೇಶ್ವರ ಮಾರ್ಗವಾಗಿ ಶಿವಯೋಗ ಮಂದಿರ ಸುತ್ತಿ ಬೇಲೂರು ಮಾರ್ಗವಾಗಿ ಹಿರೇಹಾಳ ತಲುಪುವುದು. ಕಾರಣವಿಷ್ಟೆ ನಿಸರ್ಗದ ಮಡಿಲಲ್ಲಿ ಸಾಗಿ ಪ್ರವಾಸದ ಅನುಭವದ ಸ್ವರ್ಗ ಕಾಣುವ ಬಯಕೆ. ಹಾನಾಪೂರ ದಾಟಿದ ಮೇಲೆ ನಂದಿಕೇಶ್ವರ ತಲುಪುವ ಮುನ್ನ ಬೃಹತ್ತಾದ ಗುಡ್ಡ ಕೊರೆದು ನಿರ್ಮಿಸಿದ ಗುಳೇದಗುಡ್ಡ ದಿಂದ ಶಿವಯೋಗ ಮಂದಿರ ತಲುಪುವ ದ್ವಾರಬಾಗಿಲನಂತಹ ಮಾರ್ಗ ಗುಡ್ಡ ಸೀಳಿ ಮಾಡಿದ ಆಳದ ದಾರಿ. ಅದು ನಿಸರ್ಗ ಪ್ರೀಯರಿಗೊಂದು ಹಬ್ಬದ ಸಂಭ್ರಮ ಸಾಲು! ಅಲ್ಲಿಂದ ಮಲಪ್ರಭೆಯ ನದಿ ತಟದ  ಆ ವಿಹಂಗಮ ದೃಶ್ಯ ನೋಡಬೇಕು ! ಅರಸಿಕನ ಮನದಲ್ಲಿಯೂ ರಸಸ್ವಾದ ಹೊರಹೊಮ್ಮಿಸುತ್ತದೆ. ಅಂದೊಮ್ಮೆ ಜೋಳ ಕಡಲೆ ಹತ್ತಿಗಳನ್ನೆ ನೆಚ್ಚಿ ಬದುಕು ಕಟ್ಟಿಕೊಂಡ ರೈತ ,ಇಂದು ಕಬ್ಬು ಗೋವಿನ ಜೋಳ ಬೆಳೆ ನಂಬಿದ ವಾಣಿಜ್ಯ ರೈತ. ಅದು ಮಲಪ್ರಭೆಯ ನೀರು ಮತ್ತು ಬೋರವೆಲ್ ನ ಅಭಯ .ನೋಡುಗರಿಗದು ನೀಡುತ್ತಿದೆ ಶುಭಾಶಯ. ಅದೆಷ್ಟು ರಸಿಕರಿಗೆ ಕಚಗುಳಿ ಇಟ್ಟಿದೆ ಯಾರು ಬಲ್ಲರು? ಅದಕ್ಕೆ ಅಲ್ಲವೇ ನಾನು ಬೈಕಿನಲ್ಲಿ ಪ್ರಯಾಣ ಬೆಳೆಸಿದ್ದು . ನಾನು ಯಾವಾಗಲೂ 40 ಕಿ ಮೀ ವೇಗದಾಟಿಸಿದವನಲ್ಲ, ಯಾಕೆ ಹೇಳಿ ? ಒಂದು ಸಂರಕ್ಷಣೆ ತಂತ್ರವಾದರೆ ಇನ್ನೊಂದು ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ಬಯಕೆ. ಅದಕ್ಕಾಗಿಯೇ ಸಾಕಷ್ಟು ಮುಂಚಿತವಾಗಿ ನಾನು ಪ್ರಯಾಣ ಬೆಳೆಸುವುದು ! ಅದಕ್ಕಾಗಿ ನನಗೆ ಆಮೆಯ ವೇಗದವನೆಂದರೂ ಚಿಂತೆ ಇಲ್ಲಾ ಬಿಡಿ. ಸಾಗುವುದು ಸಾವಧಾನದಿಂದಲೆ ! ಲೇಟಾಗಿ ಪ್ರಯಾಣ ಬೆಳೆಸಿ ನೀಟಾಗಿ ಮಸಣದ ದಾರಿ ತುಳಿಯಬೇಕೆ ? ಇರಲಿ, ನನ್ನ ಹೊತ್ತು ನಡೆಯುವ ಎರಡು ಗಾಲಿಯ ಕುದುರೆ ಶ್ರೀ ಗುರು ಕುಮಾರೇಶ್ವರರ ಕೃಪಾಶೀರ್ವಾದದಿಂದ ತಲೆ ಎತ್ತಿದ ಶಿವಯೋಗ ಮಂದಿರ, ಅದರ ಎಡಬದಿಯಿಂದ ಸುತ್ತು ಹಾಕಿ ಮಲಪ್ರಭಾ ಪಶ್ಚಿಮದಿಂದ ದಾಟಿ ಪೂರ್ವಕ್ಕೆ ಸಾಗಬೇಕಿತ್ತು. ಇನ್ನೊಂದು ಕಡೆ ನನ್ನ ಮನುಸ್ಸಿನಲ್ಲಿ ಚಾಲುಕ್ಯರ ಹಯಗಳೋಡಾಡಿದ ಕ್ಷಾತ್ರ ಭೂಮಿಯ ಕನಸು , ಮಗದೊಂದು ಕಡೆಗೆ ವಟುಗಳನ್ನು ತರಬೇತಿಗೊಳಿಸಿ ಸಂಸ್ಕಾರದ ರಾಯಭಾರಿಗಳನ್ನು ನಾಡಿನ ಉದ್ದಗಲಕ್ಕೂ ತಲುಪಿಸುವ ಪವಿತ್ರ ಭೂಮಿ.ಇವಗಳ ಇತಿಹಾಸ ಮನಪಟಲದ ಮೇಲೆ ತಾಂಡವಾಡುತಿತ್ತು.ಅಂತೂ ನಾನು ಆಯ್ದುಕೊಂಡು ಸಾಗಿದ ನಿರ್ದಾರ ನನ್ನನ್ನು ಹೆಮ್ಮೆಯಿಂದ ಮುನ್ನುಗ್ಗುವಂತೆ ಮಾಡುತ್ತಿತ್ತು. ಮಲಪ್ರಭಾ ಬಲಬದಿಯ ಎತ್ತರಕ್ಕೆ ಪಟ್ಟದಕಲ್ಲಿನಿಂದ ಸಾಗುವ ಮಾರ್ಗ ನವಿಲುಹೊಳೆ ಮಾರ್ಗವಾಗಿ ಚಲಿಸಿ ಬದಾಮಿ ಬೇಲೂರು ಮಾರ್ಗ ಸೇರುತ್ತಿತ್ತು ಈ ಮಾರ್ಗದ ಮಧ್ಯೆ ಸಾಗುವುದು ಅಂದರೆ ಅದು ಮಲೆನಾಡಿನ ಕಾಡುಗಳಲ್ಲಿಯೇ ಸಂಚರಿಸಿದಂತೆ ಎಡ ಬದಿಗೆ ಹಸಿರನುಟ್ಟು ಹೊಸ ಸಂಚಲನ ಸೃಷ್ಟಿಸಿದ ಆ ಕಾಡು ಅದು ಸಹ್ಯಾದ್ರಿಗೂ ಸವಾಲು ಹಾಕಿದಂತಿತ್ತು ಬಲಬದಿಗೆ ಹಾದಿಗುಂಟಾ ಸಾಗಿದ ಮಲಪ್ರಭೆ ಹಾವಿನ ನಡಿಗೆಯನ್ನು ನಾಚಿಸುತ್ತಿತ್ತು ಅದು ನವಿಲು ತೀರ್ಥ ಡ್ಯಾಮಿನ ಪುಣ್ಯದ ಫಲವೊ ಇಲ್ಲವೆ ಅಲ್ಲಲ್ಲಿ ಮಾಡಿದ ಚಿಕ್ಕ ಡ್ಯಾಮಿನ ಫಲಶೃತಿಯೊ ಕಾಶ್ಮೀರದ ಕಣಿವೆಯನ್ನು. ಧರೆಗಿಳಿಸಿತ್ತು,ಅಲ್ಲಲ್ಲಿ ನವಿಲುಗಳ ನರ್ತನ .ಹಾರಿದರೆ ಹ್ಯಾಲಿ ಕ್ಯಾಪ್ಟರನ ಸಪ್ಪಳ; ಆಶ್ವಾದಿಸಲು ಎರಡು ಕಣ್ಣುಗಳು ಸಾಲದಾದವು. ಕಣ್ಣು ತೆಗೆಯುವದರೊಳಗಾಗಿ ಬದಾಮಿ ಬೇಲೂರು ರಸ್ತೆಗೆ ಬಂದು ತಲುಪಿಯಾಗಿತ್ತು ,ಛೇ ! ಇನ್ನೊಂದಿಷ್ಟು ರಸ್ತೆ ಇದ್ದರೆ ಚನ್ನಾಗಿರುತ್ತಿತ್ತು ಎಂದುಕೊಂಡೆ.ಈಗ ನನ್ನ ಎರಡು ಗಾಲಿಗಳ ಕುದುರೆ ಹಿರೇಹಾಳ ಮಾರ್ಗದ ಮಧ್ಯೆ ನನಗೂ ರಸ್ತೆಯಲ್ಲಿ ಅಧಿಕಾರವುಂಟೆಂದು ಎಡ ಪಾರ್ಶ್ವದಲ್ಲಿ ಸೈನಿಕನ ಕುದುರೆಯಂತೆ ಬೀಗುತ್ತಾ ಓಡುತ್ತಿತ್ತು.ನಾನು ಹಿರೇಹಾಳ ಪ್ರೌಢಶಾಲಾ  ಮೈದಾನ ತಲುಪಿದಾಗ ಗುರುವಂದನೆಗೆ ಹಾಕಿದ ಮಂಟಪ ಮದುವೆ ಮಂಟಪ ಮೀರಿಸಿ ಗುರುಗಳ ಬರುವಿಗೆ ಸ್ವಾಗತ ಕೋರುತ್ತಿತ್ತು.ಅವರ ಪ್ರೀತಿಗೆ ಬೆಲೆ ಕಟ್ಟಲಾದೀತೆ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜು ಹಂತದ ಎಲ್ಲ ಗುರುಗಳ ಆಶೀರ್ವಾದ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳ ಮುಖದ ಮೇಲೆ ಸಾರ್ಥಕ ಭಾವ ಮನೆ ಮಾಡಿತ್ತು .ಮೂರು ತಿಂಗಳ ಹಿಂದಿನಿಂದ ತಯಾರಿ .ಒಂದು ವರೆ ಲಕ್ಷ ರೂಪಾಯಿ ಕೂಡಿಸಿದ್ದರಂತೆ ಇಲ್ಲಿ ಹಣ ಗೌನ. ಅವರ ಸಾರ್ಥಕ ಭಾವಕ್ಕೆ ಬೆಲೆ ಕಟ್ಟಲಾಗದು.ಅದೆಷ್ಟೋ ನಿವೃತ್ತ ಶಿಕ್ಷಕರೂ ಹಾಗೂ ಹಾಲಿ ಶಿಕ್ಷಕರು ಇಲ್ಲಿ ಭಾಗವಹಿಸಿದ್ದರು. ಇವರ ಜೊತೆಗೆ ಸಂಘಟನೆಗೆ ಕೈ ಜೋಡಿಸಿದ ಆಕಾಶವಾಣಿ ಕಲಾವಿದ ಚಂದ್ರಶೇಖರ ವಡಗೇರಿ ನಿವೃತ್ತ ಶಿಕ್ಷಕರ ಮಾರ್ಗದರ್ಶನ ,ಆ ಕಾರ್ಯಕ್ರಮ ಯಶಸ್ವಿಗೆ ಸಾತು ನೀಡುತ್ತಿತ್ತು ವೇದಿಕೆ ಮುಂಭಾಗದಲ್ಲಿ ಎಡಬಲಕ್ಕೆ ಹಳೆಯ ವಿದ್ಯಾರ್ಥಿಗಳು( ಜವಾಬ್ದಾರಿ ನಾಗರಿಕರು) ಕೈ ತುಂಬಾ ತಟ್ಟೆ ಅದರ ತುಂಬಾ ಪುಷ್ಪ ಮೈಕ್ ಧ್ವನಿಯ ಆಲಪಕ್ಕೆ ಪುಷ್ಪ ಮಳೆ, ಇದು ಯಾವ ಉದ್ಯೋಗಕ್ಕೆ ಸಲ್ಲುವ ಗೌರವ ಹೇಳಿ ? ವೇದಿಕೆ ಏರಿದಾಗ ಹನ್ನೊಂದು. ತಡೆದ ವರುಣ ಹೊಂಚು ಹಾಕಿ ಕಾರ್ಯಕ್ರಮಕ್ಕೆ ನೀಡಿದ  ಸಿಂಚನ ! ಮುಂಜಾನೆ ಬಂದದ್ದು ಮಳೆ ಅಲ್ಲ ಮಧ್ಯಾಹ್ನ ಬಂದವ ಅಳಿಯ ಅಲ್ಲ ಎನ್ನುವ ಮಾತೊಂದನ್ನು ಎಲ್ಲೋ ಜನಪದರ ಮಾತಿನಲ್ಲಿ ಕೇಳಿದ ನೆನಪು.ಇರಲಿ ಈ ಸಂಚಲನಕ್ಕೆ ಎದೆಗುಂದುವವರಾರು . ಗೌರವ ನೀಡುವ ಭಾವದ ಪ್ರೀತಿಯ ಪರಾಕಾಷ್ಠೆ ಸೋಲಿಸುವವರಾರು? ಪದವಿ ಪೂರ್ವ ಕಾಲೇಜಿನ ಕಾರಿಡಾರಿನಲ್ಲಿ ಮರುಸೃಷ್ಠಿಯಾದ ವೇದಿಕೆಯಲ್ಲಿ ಪ್ರೀತಿಯ ಅಲೆ ಪದಗಳಾಗಿ ಭಾಷೆಯ ಮೂಲಕ ಭಾವನದಿಯ ಪ್ರವಾಹವಾಗಿ ಹರಿಯಿತು. ಗುರು ಶಿಷ್ಯರೆಲ್ಲ ಪೋಟೋ ಶೆಷನ್ನಿಗೆ ಮುಖ ಅರಳಿಸಿದ್ದಾಯಿತು. ಶಿಸ್ತಿನ ಶಿಪಾಯಿಯಂತೆ ಪ್ರೀತಿಯ ಭಾವ ತುಂಬಿದ  ವಿದ್ಯಾರ್ಥಿಗಳು ಬಡಿಸುವ ಬೋಜನಕ್ಕೆ ಯಾವ ಪೈವ್ ಸ್ಟಾರ ಹೋಟೆಲ್ ಗಳು ಸಮನಾಗಲಾರವು .ಈ ತುತ್ತಿಗೆ ಬೇಲೆ ಕಟ್ಟಲಾದೀತೆ ? ಇದೆ ಅಲ್ಲವೆ ಋಣಾನುಬಂಧ ಅನ್ನುವದು .ಕಲಿಸಿದ್ದು ಎರಡೆ ವರ್ಷಗಳು ಅವರ ಪ್ರೀತಿಗೆ ನೂರು ವರುಷಗಳ ಆಯು ಇಮ್ಮಡಿಯಾಯಿತು.

ಧನ್ಯವಾದಗಳು ,ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ

Sunday, June 18, 2023

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು 
       ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳನ್ನು
ಆಸ್ವಾದಿಸುವ ರೂಪ ಬೇರೆ ಬೇರೆ ಆಗಿರುತ್ತದೆ ಅವುಗಳಲ್ಲೊಂದಿಷ್ಟುಇಲ್ಲಿ ಮೇಲಕು ಹಾಕುವದ ರ ಮೂಲಕ ಸಂತೋಷ  ಪಡುತ್ತಿದ್ದೇನೆ.ಅಪ್ಪ ಗಳೆ ಬಿಟ್ಟುಕೊಂಡು ಹೊರಟಾಗ ಎತ್ತಿನ ಆಶಿಯ ಮೇಲೆ ಕುಳ್ಳರಿಸಿ ಬೀಳಬಾರದೆಂದು ಮೇಳಿ ಹಿಡಿಸಿ ಸಂತೋಷ ಪಡಿಸಿದ. (ಬಹುಶಃ ಈಗಿನ ದಿನಮಾನದಲ್ಲಿ ಆವನ ರೀತಿಯಾಗಿ ಮಕ್ಕಳನ್ನು  ಆಶಿ ಮೇಲೆ ಕುಳ್ಳಿರಿಸಿ ಹೊಲಕ್ಕೆ ಕರೆದುಕೊಂಡು ಹೋದದ್ದು ನಾನು ಕಂಡಿಲ್ಲ)  ಮಧ್ಯ ರಾತ್ರಿಯಲ್ಲಿ ಎದ್ದು ಬುಂದೆದುಂಡಿ ಬೇಕು ಎಂದು ಹಠ ಹಿಡಿದಾಗ ರಾತ್ರಿ ಅಂಗಡಿ ತಗಸಿ ಬುಂದೆ ಕೊಡಸಿದ. ಅದಕ್ಕಿಂತ ಮೊದಲು ಸಣ್ಣವನಿದ್ದಾಗ ಹೆಗಲು ಮೇಲೆ ಹತ್ತಿಸಿಕೊಂಡು ಬಿತ್ತಿದ್ದಾನಂತೆ ಆಗ ನಾನು ಕಾಗೆಗಳನ್ನು ಓಡಿಸಲು ಕೇಕೆ ಹಾಕಿದ್ದನ್ನು ಹೇಳಿ ನೀ ಹಠವಾದಿಯಾಗಿದ್ದಿ ಎಂದು ಪುಟಗಟ್ಟಲೆ ಹೇಳಿದ್ದಾನೆ. 

* ಅಪ್ಪ ನಮ್ಮೆಲ್ಲರ ಛಪ್ಪರ *

ಅಪ್ಪನೆನ್ನುವ ಅಕ್ಷರವೆ ಹಾಗೆ 
ಚಪ್ಪರದಂತೆ ನೆರಳು ನೀಡಿ 
ಅಪ್ಪಿಕೊಂಡು ಓಡುವ ಸಾರೋಟ॥

ಅನುದಿನವೂ ಅಕ್ಕರೆಯ ಶ್ರೀರಕ್ಷೆ, 
ಎನ್ನ ಬೆಳಸಿದ ಆಗಸದೆತ್ತರದ ವೃಕ್ಷ
ಕಾಗೆ ಗುಬ್ಬಚ್ಚಿಯಂತೆ ಗೂಡು ಕಟ್ಟಿದ ಅಪ್ಪ॥

ಸತ್ಯದ ಆಲ ನೆಟ್ಟು ನೀರು ಗೊಬ್ಬ ಕೊಟ್ಟು
ನಿತ್ಯಸತ್ಕರ್ಮದ ಬೇಲಿ ಹೆಣೆದು 
ನರಿ ತೋಳ ಸುಳಿಯದಂತೆ ಕಾದ ಅಪ್ಪ॥

ನೆಲೆನಿಂತ ಹೊಲವೆ ಉರಿದರು  
ಛಲದಿಂದ ಅರಿವಿನ ನಗೆ ಬೀರಿ
ದೊರೆಯಂತೆ ಬೆಳೆಸಿದ ಅಪ್ಪ ॥

ಬಿರುಗಾಳಿ ,ಮಳೆಯಿಲ್ಲಾ ಬರಿ ದೂಳು
ಉರಿ ಬಿಸಲಿನಲ್ಲಿ ಬರಿಗಾಲ ಪಯಣ
ಹೊರೆಯಾದರು ಬಾರ ಎಳೆದ ಅಪ್ಪ .॥

ಹೊರಗೆ ದುರ್ವಾಸ ಮುನಿ
ಒಳಗೆ ಮಹಾಭಾರತದ ವ್ಯಾಸ
ಇಳೆಗೆ ಶ್ರೀರಾಮನ ಪ್ರೀತಿ ತಂದ ಅಪ್ಪ ॥

ಇಂದು ಇಲ್ಲ ಮುಂದೆ ಸಿಗುವುದಿಲ್ಲ
ಹುಡುಕಲು ಹೋಗಬೇಕಿಲ್ಲ
ಎದೆಯಾಳದಲ್ಲಿ ಅಡಗಿ ಕುಳಿತ ಅಪ್ಪ॥

Thursday, June 15, 2023

ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನ








ಇಲಾಖೆಗೊಂದು ನಮನ
ಅನ್ನ ,ಅಧಿಕಾರ,ಅವಕಾಶ ನೀಡಿದ ಇಲಾಖೆಗೆ ಎಷ್ಟು ಸಲಾಮ್ ಹೇಳಿದರೂ ಸಾಲದು .ಸಂಸ್ಕಾರ, ವಿದ್ಯೆ, ಉದ್ಯೋಗ, ಬದುಕು ಕಟ್ಟಿಕೊಳ್ಳಲು ತವಕಿಸುವ ಅಸಂಖ್ಯಾತ ವಿದ್ಯಾರ್ಥಿಗಳ ಆಶಾಕಿರಣವೆ ಪದವಿ ಪೂರ್ವ ಶಿಕ್ಷಣ ಇಲಾಖೆ .ಅಲ್ಲಿ ನನಗೂ ಒಂದು ಜಾಗ ಇದೆ ಎನ್ನುವುದೆ ಹೆಮ್ಮೆಯ ವಿಷಯ .ವರ್ಷದುದ್ದಕ್ಕೊ ಬೋಧಿಸಿ ಮಕ್ಕಳನ್ನು ಪರೀಕ್ಷೆ ಎಂಬ ಯುದ್ಧಕ್ಕೆ ಕಳುಹಿಸಿದ ನಮಗೆ ಮತ್ತೊಂದು ಜವಾಬ್ದಾರಿ. ಮಾತಿನ ಜಾಗೆಗೆ ಮೌನ ತಂದು ಕಾಯುವ  ಕಾರ್ಯ ,ಅಂದರೆ ನಕಲು ಮಾಡುವುದನ್ನು ತಡೆಯುವ ಒಂದೇ ಕಾರ್ಯವಲ್ಲದೆ ಸೌಜನ್ಯದ ಮೂಲಕ ಪರೀಕ್ಷಾ ಕಾರ್ಯದ ಜೊತೆಗೆ ಓದಿದ ಮಕ್ಕಳಿಗೆ ನ್ಯಾಯ ಒದಗಿಸುವ ಬಹು ಅಮೂಲ್ಯವಾದ ಕಾರ್ಯಗಳು. ಅದನ್ನು ಮಾಡಿದ್ದೇವೆ  ಎನ್ನುವುದೆ ಹೆಮ್ಮೆಯ ಸಂಗತಿ. ಅದು ಜಾಗೃತ ದಳದ ಸದಸ್ಯನಾಗಿರಬಹುದು ಇಲ್ಲವೆ ಮೌಲ್ಯಮಾಪಕನಾಗಿರಬಹುದು.ಇರಲಿ ಮುಖ್ಯ ವಿಷಯಕ್ಕೆ ಬರುತ್ತೇನೆ ದಿನಾಂಕ 7 ಜೂನ 2023 ರಂದು ರಾಜಧಾನಿಯಲ್ಲಿ ದ್ವಿತೀಯ ಪಿ.ಯು ಸಿ ಉತ್ತರ ಪತ್ರಿಕೆ ಮೌಲ್ಯಮಾಪನಾಕ್ಕೆ ಕರೆ ಬಂದಾಗ ಖುಷಿಯಂತೂ  ಆಯಿತು .ಏಕೆಂದರೆ ತಿಂಗಳ ಸಂಬಳದೊಂದಿಗೆ ಪ್ರಯಾಣ ವೆಚ್ಚ ಹಾಗೂ ಗೌವಧನದೊಂದಿಗೆ ಪ್ರವಾಸ.ಅದಕ್ಕೆ ಅಲ್ಲವೆ ನಾನು ಎಷ್ಟು ಋಣಿಯಾಗಿದ್ದರೂ ಕಡಿಮೆ ಎಂದದ್ದು. ದಿನಾಂಕ 13.06.2023 ರ ಮೌಲ್ಯಮಾಪನ ಕಾರ್ಯದ ನಂತರ ಸ್ನೇಹಿತರಿಲ್ಲ ಸೇರಿ ಸಿಕ್ಕ ಬಿಡುವ ಬಳಸಿಕೊಂಡು ತಾರಾಲಯ ನೋಡಬೆಕೆಂದು ಯೋಜನೆ ರೂಪಿಸಿದೆವು. ನನ್ನ ಸಹಪಾಠಿ ಆಂಗ್ಲ ಭಾಷೆಯ ಉಪನ್ಯಾಸಕ ಹೆಚ್ ವಾಯ್ ಕುಂದರಗಿ ಆತನ ಗೆಳೆಯ ದಳವಾಯಿ ಎಲ್ಲರೂ ಸೇರಿ  ಮೊಬೈಲ್ ತಡಕಾಡಿ ತಾರಾಲಯ ಇರವ ಜಾಗ ಪತ್ತೆಹಚ್ಚುವ ಕಾರ್ಯ ಮಾಡಿದೆವು ಕಾರಣ ಇಷ್ಟೇ ರೈಲು ಬಿಡುವ ವೇಳೆ 7.00 ಗಂಟೆಗೆ ಅಲ್ಲಿಯವರೆಗೆ ಮಾಡುವುದಾದರು ಏನು ? ಸಿಕ್ಕ ಒಂದೆರಡು ತಾಸು ಏನು ಮಾಡುವುದು. ಸದುಪಯೋಗ ಮಾಡಬೇಕಲ್ಲವೆ ? ಅದಕ್ಕಾಗಿ  ಇದ್ದ ಲಗೇಜ್ ಕೆಂಪೇಗೌಡ ಬಸ್ ನಿಲ್ದಾಣದ ಲೋಕರ್ ನಲ್ಲಿಟ್ಟು ಬಿ ಎಮ ಟಿ ಸಿ ಬಸ್ ಏರಿ ತಾರಾಲಯದ   ಮುಂದೆ ನಿಂತರೆ ನಿರಾಶೆಯ ಭೂತವೆ ನಮಗೆದುರಾಗಿತ್ತು ,ಯಾಕೆಂದರೆ ಅಂದು ಮಂಗಳವಾರ ರಜೆ ! ಎದೆಗುಂದುವ ಜಯಮಾನ ನಮ್ಮದಲ್ಲವಲ್ಲ ಆಸ್ವಾದಿಸುವ ಮನಸ್ಸಿದ್ದರೆ ಮತ್ತೊಂದು ಮಗದೊಂದು ಹೌದಲ್ಲವಾ ? ಸ್ನೇಹಿತ ,ಹುಚ್ಚೇಶ ಕುಂದರಗಿ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನ ಕಡೆಗೆ ಹೆಜ್ಜೆ ಹಾಕಿದ, ಅವನಿಗೆ ನನಗಿಂತ ಬೆಂಗಳೂರು ಚಿರಪರಿಚಿತ . ಪದವಿ ಪಡೆದ ನಂತರ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಬಂದನೇನೊ ಸರಿ ಆದರೆ ಕಾಸು ಕಾಲಿ ಮಾಡಿ ಬದುಕು ಈಜಲು ಬೋಧನೆ ಕಾಯಕ ಪ್ರಾರಂಭ ಮಾಡಿದನಂತೆ ಆ ಅನುಭವದ ಆಧಾರದ ಮೇಲೆ ರಾಷ್ಟ್ರೀಯ ಸೈನಿಕ ಸ್ಮಾರಕ ಉದ್ಯಾನವನ ಸೇರಿದ್ದಾಯಿತು. ಬೆಂಗಳೂರು ಎಂದರೆ ಕಾಂಕ್ರೀಟ್ ಕಾಡು... ಗೂಡಿನ ಮೇಲೆ ಗೂಡು ಕಟ್ಟಿ ಗಣಕಯಂತ್ರದ ಮಂತ್ರಜಪಿಸುವ ಟೆಕ್ಕಗಳ ಕಲರವವೆಂದು ಭಾವಿಸದ ನಮಗೆ ಅಲ್ಲೊಂದು ಸ್ವರ್ಗದ ತುನುಕೊಂದಿದೆ, ಹಸಿರನುಟ್ಟು ಉಸಿರು ನೀಡುವ ಹೊಸ ಆಶಾಭಾವ ಅರಳಿಸುವ ಜಾಗೆ ಇದೆ ಎಂದು ಅರಿವಾದದ್ದು ಆಗಲೇ.ನಾವೆ ಸೃಜಿಸುವ ಪ್ರಕೃತಿ ಮಡಿಲಲ್ಲಿ, ಮನಸ್ಸು ಹೃದಯ ತಂಪು ಮಾಡಿಕೊಂಡೆವು. ನಮ್ಮ ಈ ಪಯಣದ ಸವಿನೆನಪನ್ನು ಹಂಚಿಕೊಳ್ಳಲು ಹೋಂಚು ಹಾಕಿದ್ದೆ ಈ ಲೇಖನ. ಉದ್ಯಾನವನದಲ್ಲಿ  ಹಕ್ಕಿಗಳ ಕಲರವ, ಅಳಿವಿನಂಚಿನಲ್ಲಿವೆ ಎಂದು ಬಾವಿಸುವಷ್ಟು ಕಡಿಮೆಯಾದ ಅಳಿಲು, ಸ್ವಚ್ಚಂದಾಗಿ ಚಿಮ್ಮುತ್ತಾ ನೆಗೆಯುವ ಆ ಸುಂದರವಾದ ಕ್ಷಣ ನಿಸರ್ಗದ ಮಡಿಲಲ್ಲಿ ಸಿಗದೆ ಇನ್ನೆಲ್ಲಿ ಸಿಕ್ಕೀತು !.ಶ್ರೀ ರಾಮನಿಗೆ ಲಂಕೆಗೆ ತೆರಳಲು ಸೇತುವೆ ನಿರ್ಮಿಸುವ ಕಾಯಕಕ್ಕೆ ಸಹಾಯ ಮಾಡಿದ ಜೀವಿ ಅಳಿಲು ಕಥೆ, ಒದ್ದೆಯಾದ ಮೈಗೆ ಮಣ್ಣು ಹತ್ತಿಸಿ ಸೇತುವೆಗೆ ಮಣ್ಣು ನೀಡಿದ ಸಣ್ಣ (ಮಹಾ) ಜೀವಿಯನ್ನೊಮ್ಮೆ ಮನ ತುಂಬಿ ನೋಡಿ ಪುಳಕಿತನಾದೆ.ಕ್ಷಣ ಕಳೆಯುವದರೊಳಗೆ ಅತ್ತಿಂದ ಪೋನ್ ರಿಂಗುಣಿಸಿತು ಅದು ಆಂಗ್ಲ ಉಪನ್ಯಾಸಕನಿಗೆ ಗೆಳೆಯನ ಸಲಹೆ, ಕಿವಿ ನಿಮಿರುವಂತೆ ಮಾಡಿತ್ತು ಅದೇನಂದರೆ ಅದೆ ಉದ್ಯಾನವನದಲ್ಲಿಯ ಯುದ್ಧಕ್ಕೆ ಸಂಬಂಧಿಸಿದ ಯುದ್ಧಾಶ್ತ್ರಗಳ ಮಾದರಿಗಳನ್ನು ನೋಡಬಹುದು ಎಂದು .ತಡ ಮಾಡದೆ ಹೆಜ್ಜೆ ಹಾಕಿ ಯುದ್ಧ ಟ್ಯಾಂಕರ್  ಮುಂದೆ ನಿಂತು ಮೊಬೈಲ್ ಶಾಟ್ ಗೆ ಮುಖ ಅರಳಿಸಿದೆವು. ಒಂದು ಕಾಲದಲ್ಲಿ ಶತೃಗಳ ಎದೆ ನಡುಗಿಸಿ ಸಮರ ವೀರರ ಗೆಳೆಯ ! ಇಂದು ನಮ್ಮ ಉದ್ಯಾನವನದ ಪ್ರವಾಸಿಗರ ಮನತನಿಸುವ ಸೈನಿಕರ ಸಾಹಸ ಸಾರುವ ಸಹೋದರ.ಸ್ವಾತಂತ್ರ್ಯ ನಂತರ ಭಾರತ ದೇಶ ದೊಡ್ಡ ಯುದ್ಧ ಮಾಡಿದ್ದೆ ನಾಲ್ಕು ಅದು ಒಂದು ಸಾರೆ ಚೀನಾದೊಂದಿಗೆ ನಾಲ್ಕು ಬಾರೆ ಪಾಕಿಸ್ತಾನದೊಂದಿಗೆ ಚೀನಾದ ಜೊತೆ ಹೊರತುಪಡಿಸಿ ಪಾಕಿಸ್ತಾನ ಜೊತೆ ಯುದ್ಧ ಮಾಡಿದ ನಾಲ್ಕು ಯುದ್ಧಗಳಲ್ಲಿ ಭಾರತ ದೇಶ ಯಶ ಕಾಣುವದರಲ್ಲಿ ಇವುಗಳ ಪಾತ್ರ ಹಿರಿದಾಗಿತ್ತು ಅದು 1947,1965-66,1971,1999,ಇನ್ನೊಂದು ಬದಿಯಲ್ಲಿ ಕ್ಷಿಪಣಿಗಳ ಮಾದರಿ, ಶತೃಗಳನ್ನು ಸಂಹಾರ ಮಾಡಲು ಭೂಮಿಯಿಂದ ಭೂಮಿಗೆ ಚಿಮ್ಮುವ ಯದ್ಧಾಶ್ತ್ರ ನಾಗ , ಅಗ್ನಿ, ಬ್ರಹ್ಮೋಸ್, ಪೃಥ್ವಿ ಇನ್ನೊಂದು ಕಡೆ ಪ್ರಭಲ ರಾಷ್ಟ್ರಗಳಿಗೆ ಕಡಿಮೆ ಇಲ್ಲದ PSLV ಯಂತಹ ಉಪಗ್ರಹ ಉಡ್ಡಯನ ಯಂತ್ರಗಳ ಮಾದರಿ. ಭಾರತದ ಹಿರಿಮೆಯನ್ನು ಪ್ರತಿ ಪ್ರವಾಸಿಗರು ಹೆಮ್ಮೆ ಪಡುವಂತೆ ಮಾಡುತ್ತಿವೆ. ಈ ಕಾರ್ಯ ಸಣ್ಣದೇನಲ್ಲ ಪ್ರತಿ ಸೈನಿಕರ ಬಲಿದಾನ ಭಾರತೀಯರ ಬೆಳಕಿನ ಕಿರಣ.ಇನ್ನೊಂದು ಕಡೆ ಯುದ್ಧ ಹಡಗುಗಳ ಮಾದರಿ.ಒಟ್ಟಾರೆ ಭೂದಳ, ವಾಯುದಳ ನೌಕಾದಳದ ಯುದ್ಧಾಸ್ತ್ರಗಳ ಮಾದರಿಗಳು ಭಾರತದ ರಕ್ಷಣಾ ವ್ಯವಸ್ಥೆಯ ಚಿತ್ರಣವನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ನಮ್ಮನ್ನೂ ಸಹ ಮಾನಸಿಕವಾಗಿ ಕ್ಷಣ ಶತೃ ಗಡಿಗಳಲ್ಲಿ ತಂದು ನಿಲ್ಲಿಸಿತ್ತು.ಗಡಿಯಾರದ ಮುಳ್ಳುಗಳು ನಮಗರಿವಿಲ್ಲದೆ ವೇಗವಾಗಿ ಚಲಿಸುತ್ತಿದ್ದವು ಮತ್ತೊಂದು ಹೊಸ ಅನುಭವ. 












ಹೆಚ್ ವಾಯ್ ಕುಂದರಗಿ ಆಂಗ್ಲ ಉಪನ್ಯಾಸಕನಿಗೂ ಒಂದು ಕನಸು. ಮರಳಿ ಹೋಗುವದರೊಳಗಾಗಿ ನನಗೆ ಮೆಟ್ರೋ ಹತ್ತಿಸಬೇಕು ಎನ್ನುವುದು. ಈಗಾಗಲೆ ಹಲವು ಬಾರೆ ಬೆಂಗಳೂರು ಪ್ರಯಾಣ ಮಾಡಿದ್ದರೂ ನಾನು ಮಾತ್ರ ಮೆಟ್ರೋ ಹತ್ತಿರಲಿಲ್ಲ ಹಾಗಾಗಿ ಆ ಅನುಭವ ಪಡೆಯಲು ತವಕಿಸುತ್ತಿದ್ದೆ ಅದಕ್ಕಾಗಿಯೇ ಕುಂದರಗಿ ಸರ್ ಒಂದು ದಿನ ಮೆಟ್ರೋ ನಿಲ್ದಾಣ ಸುತ್ತಿಸಿ ಬಂದಿದ್ದರು ಕೂಡಾ.ಈಗ ವಿಧಾನ ಸೌಧದಿಂದ ರೈಲು ನಿಲ್ದಾಣಕ್ಕೆ ಬರುವಾಗ ಆಯ್ಕೆ ಮಾಡಿಕೊಂಡ ಮಾರ್ಗವೆ ಮೆಟ್ರೋ.ಅದು ಮಾನವನ ನಾಗರಿಕತೆಯ ಶ್ರೇಷ್ಠತೆ ಪ್ರತೀಕ .ನಾಗರಿಕತೆ ಎಂದರೇನು ? ಮಾನವ ತನ್ನ ಬದುಕನ್ನು ಸುಲಭಗೊಳಿಸಿಕೊಳ್ಳಲು ಆವಿಷ್ಕರಿಸಿದ ಭೌತಿಕ ವಿಧಾನ.
ಆಹಾ ..ಮೆಟ್ರೋ ಮಾನವ ಭೂಮಿಯ ಮೇಲೆ ನಿರ್ಮಿಸಿಕೊಂಡ ಸ್ವರ್ಗ .ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ನಮಗೆ ಬಂಗಾರ ಬೇಕೊ ಇಲ್ಲ ನೀರು ಬೇಕೊ ಎದು ಕೇಳಿದ್ದರೆ ಖಂಡಿತವಾಗಿಯೂ ನಾವಂತೂ ನೀರೆ ಎಂದು ಹೇಳುವ ಸ್ಥಿತಿಗೆ ಬಂದು ತಲುಪಿದ್ದೆವು .ಮೆಟ್ರೋದ ಒಳಗಡೆ ನೀರಿನ ವ್ಯವಸ್ಥೆ ಮಾಡಿದ್ದರಾದರೂ ಕುಡಿಯುವ ರೀತಿ ನಮಗೆ ತಿಳಿದಿರಲಿಲ್ಲ ಗ್ಲಾಸ್ ಅಂತೂ ಇರಲಿಲ್ಲ ಕುಡಿಯುವದಾದರೂ ಹೇಗೆ ? ಪ್ಪೆಪಿನಿಂದ ಜಿಗಿಯುವ ನೀರಿಗೆ ಬಾಯಿ ತೆರೆಯುವ ಸರದಿ ಒಬ್ಬರಾದ ಮೇಲೊಬ್ಬರದು, ಬಹುಶ: ಪ್ರಾಣಿಗಳ ಅನುಕರಣೆಯೊ ಇಲ್ಲವೆ ಇತಿಹಾಸ ಮರುಕಳಿಸುವ ಮುನ್ಸೂಚನೆಯೊ ನನಗಂತೂ ಅರ್ಥ ಆಗಲಿಲ್ಲ. ಪ್ರತಿ ಐದು ನಿಮಿಷಗಳಿಗೊಮ್ಮೆ ಎರಡೂ ಬದಿಗಳಲ್ಲಿ ಬಂದು ವಿರುದ್ಧವಾದ ದಿಕ್ಕಿನಲ್ಲಿ ಹೋಗುವ ರೈಲುಗಳು ತಮ್ಮ ಕಾಯಕದಲ್ಲಿ ಮುಳಿಗಿದ್ದವು .ಗೆನು ಹೊಟ್ಟೆ ಹೊರೆಯಲು ನಿತ್ಯವೂ ಯಂತ್ರದಂತೆ ಚಲಿಸುವ ಮಾನವ ಯಂತ್ರಗಳು ಅದಾವುದರ ಪರಿವೆಯೇ ಇಲ್ಲದೆ ನೆಕಾರನ ಲಾಳಿಯಂತೆ ಅತ್ತಿಂದಿತ್ತ 
ಓಲಾಡುವಂತೆ ಕಂಡಿತು.ನಿಲ್ದಾಣ ತಲುಪಿದ್ದೆ ತಡ ಇರುವೆ ಹಿಂಡಿನಂತೆ ಓಡುವ ಜನ ಇನ್ನೆಂಥಹ ನಾಗರಿಕತೆ ಕಡೆ ದಾವಿಸುತ್ತಿದೆ ? ನಾವೂ ಓಡಲೆ ಬೇಕು ಇಲ್ಲದಿದ್ದರೆ ತಲುಪಲು ತಡವಾದೀತು. ಅನಾಗರಿಕರು ಎನ್ನಲು ಜನ ತುದಿಗಾಲಲ್ಲಿ ನಿಂತಿದ್ದಾರೆ ಅದಕ್ಕೆ ಅಲ್ಲವೇ ನಾನು ನಮ್ಮ ಆಂಗ್ಲ ಉಪನ್ಯಾಸಕರಿಗೆ ಮೆಟ್ರೋ ಹತ್ತಬೇಕು ಎಂದದ್ದು.ಸಮಯ ನಮಗರಿವಿಲ್ಲದೆ ಸಾಗುತ್ತಿತ್ತು 10 ನೇ ಪ್ಲಾಟ್ ಪ್ಲಾಟ್ ಫಾರ್ಮ್ ತಲುಪಿದಾಗ ವೇಳೆ 7.50 ನಮಗಾಗಿ ಬಂದ ಗೋಲಗುಂಬಜ ಎಕಎಕ್ಸ್ ಪ್ರೆಸ್ ಗೂಡು ತಲುಪಿಸಲು ಅಭಯ ಹಸ್ತ ನೀಡಿತ್ತು.ಚುಕ್ ಬಕ್, ಚುಕ್ ಬುಕ್,ಶರವೇಗದಿಂದ ಓಡುತ್ತಿದ್ದರೆ. ಅದೆ ತಾನೇ ಆಸ್ವಾದಿಸಿ ಬಂದ ಸನ್ನಿವೇಶಗಳು ಮನ ಪಟಲದ ಮೇಲೆ ಮೂಡಿ ಚಿತ್ರದ ಸನ್ನಿವೇಶಗಳಂತೆ  ಮಾಯವಾಗುತ್ತಿದ್ದವು ವೇಳೆ 10 ಗಂಟೆ, ನಿದ್ರಾ ದೇವತೆ ನಮಗರಿವಿಲ್ಲದೆ ನಮ್ಮನ್ನು ಆವರಿಸಿಕೊಂಡಳು. ತಾಯಿ ಮಗುವಿಗೆ ತೊಟ್ಟಿಲು ತೂಗುವಂತೆ ರೈಲು ಚುಕ್ ಚುಕ್ಬುಕ್ ಎನ್ನುತ್ತಾ  ಓಡುತ್ತಿತ್ತು.
ನಮಸ್ತೆ ಬೆಂಗಳೂರು. 




 

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...