Friday, November 1, 2024

ಕನ್ನಡ ಮಾಲೆ


ಮರೆಯದ ಮಮತೆಯ ಪ್ರೀತಿಯ ಅಲೆ
ಹರಡಿತು ದೇಹದ ಕಣ ಕಣ  ಭಾವದ ಬಲೆ।
ಕನ್ನಡ ಮಾತೆಯ ಕರುಣೆ ನನ್ನಯ ಮಾಲೆ
ಭಿನ್ನಮತ ಮಾಡಿದರದು ಬೆಂಕಿಯ ಜ್ವಾಲೆ॥

ಕನ್ನಡ ತಾಯಿಯ ಚೆನ್ನುಡಿ ಮರೆಯಲುಂಟೆ
ನನ್ನಯ ಲೇಖನಿ ಕನ್ನಡಿ ಅದಕುಂಟು ।
ತೋರಿಸ ಬಯಸುವೆ ಎದೆಯಾಳದಲ್ಲಿ
ಹಾರಿಸ ಬಯಸುವೆ ಬಾವುಟ ಮುಕುಟದಲ್ಲಿ॥

ಪಂಪ ಪೊನ್ನರ ಹಾದಿಯಲ್ಲೆ ನಡೆವೆ 
ರನ್ನ ಷಡಕ್ಷರ ಕುಮಾರವ್ಯಾಸರ ನಡುವೆ ।
ಕನ್ನಡ ಒಂದೇ ಸೇತುವೆ ಮನೆ, ದುಡಿಯುವೆ
ಕುವೆಂಪು ಬೇಂದ್ರೆ ತೋರುವ ಬೆಳಕಿನಲ್ಲಿ ॥

ಭಾರತ ಮಾತೆಯ  ತೆಂಕಣ ಕುವರಿ
ಬಿಂಕದ ಬೇಲೂರಿನ  ನಾಟ್ಯ ಮನೋಹರಿ।
ತುಂಗಭದ್ರೆಯ ತಟ ಕಲ್ಲಿನ ರಥದ ರೂವಾರಿ
ವಾತಾಪಿಯ ಗುಹೆ ನೆಲೆ ರಕ್ಕಸ ಸಂಹಾರಿ॥

ನಿನ್ನೆಯ ಮುಕುಟಕೆ ಭೀಮೆಯ ಮಜ್ಜನ
ಹರಿಯಿತು ಪವಿತ್ರ ಜಲ ಪಾದಕೆ ಕಾವೇರಿ।
ಚಾಮರ ಬೀಸಿದೆ ಸಹ್ಯಾದ್ರಿ ಬನ ಮಯೂರಿ
ನಮಿಸುತ ನಡೆಯಲು ಭಾವೈಕ್ಯದ ತಯಾರಿ॥

ಹಳ್ಳಿಯ ಹೈದರಿಗೂ ಬೆಳ್ಳಿಯಂತಹ ನುಡಿ
ಒಳ್ಳೆಯದಾಗಲು ಆಗಲಿ ಅನ್ನದ ನುಡಿ
ಇನ್ನೂ ಏಕೆ ತಡ ! ಖಾಲಿ ಕರಗಳಿದ್ದರೆ
ಮನ್ನಣೆ ದೊರೆಯದು ಭರತಖಂಡದಲ್ಲಿ ॥

 



No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...