Saturday, April 30, 2022

* ಮರಳಿ ಬಂತು ಮೇ... *

* ಮರಳಿ ಬಂತು ಮೇ... *

ಮತ್ತೆ ಮರಳಿ ಬಂತು ಮೇ 
ಹೊತ್ತು ತರಬಹುದು ಆಶ್ವಾಸನೆ 
ತುತ್ತು ನೀಡಬಹುದೆ ಈ ಹೊರೆ
ಸತ್ತ ಮೇಲೆ ಸುತ್ತಿ ಬಂದರೇನು ಫಲ 
ನಿತ್ಯವೂ ಬೆಲೆ ಬರಲಿ ಗೆಳೆಯ |

ಬಿಳಿ ನೀಲಿ ಕೂಲಿಗಳ ಬೆಲೆ ಬೇರೆ ಮಾಡಿ
ಕವಲು ದಾರಿಯ ತೆವಲು ಬೇಡ 
ಬೆವರಿಗೂ ಬೆಲೆ ಇರಲಿ ಗೆಳೆಯ 
ಬರಿ ಬಿಳಿಯದೆ ಹೊಳೆಯದಿರಲಿ
ದೇವರಾಗಲಾರೆವು ಗೆಳೆಯ ! 

ಬಿಸಿಲು ಗಾಳಿ ಬೆನ್ನಿಗಂಟಿಸಿ 
ಹಸನು ಮಾಡುವೆವು ಕೆಸರು 
ಹೇಸಿಗೆಯ ಹೆದರುವುದು 
ಹೊಸದಾರಿಗೆ ಮುದುರಿ 
ತುಸು ಕರುಣೆಯೂ ಇರಲಿ ಗೆಳೆಯ |

ಇಟ್ಟಿಗೆಯ ತಟ್ಟಿದವರು 
ಸುಟ್ಟು ಪೋಣಿಸಿದವರು 
ಗಾರೆಯಿಟ್ಟು ಕಟ್ಟಿದವರು  
ಕಡೆಗೆ ಮರೆಯಲ್ಪಟ್ಟವರು 
ಪಟ್ಟವೂ ಇರಲಿ ಗೆಳೆಯ !

ಕೆಸರಾದ ಕೈ ಮೊಸರಾಗಬೇಕು
ಉಸಿರಿರುವಾಗಲೆ ಬಾಳು 
ಹಸನಾಗಬೇಕು ಗೆಳೆಯ  
ಅಸನ ವಸನಗಳು ಸಿಗದ  
ಕನಸು ದೂರಾಗಬೇಕು ಗೆಳೆಯ |

Friday, April 29, 2022

ದ್ವಿತೀಯ ಪಿಯುಸಿ ಇತಿಹಾಸ ವಿಷಯದ ಪರೀಕ್ಷೆಯ ತಯಾರಿ

ಆತ್ಮೀಯ ವಿದ್ಯಾರ್ಥಿಗಳೆ ದಿನಾಂಕ 10.05.2022 ರಂದು ಇತಿಹಾಸ ವಿಷಯದ ಪರೀಕ್ಷೆ.ಈಗಾಗಲೇ ಹಲವು ವಿಷಯಗಳ ಪರೀಕ್ಷೆ ಬರೆದು ಪರೀಕ್ಷಾ ಭಯದಿಂದ ಹೊರಬಂದಿದ್ದೀರಿ, ಅದರಂತೆ  ಮೇ 10 ನೇ ತಾರೀಖು ಕೂಡಾ, ಇತಿಹಾಸ ಸರಳ ಮತ್ತು ಆಸಕ್ತಿ ದಾಯಕ ವಿಷಯ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೀರಿ ಅದನ್ನು ಪರೀಕ್ಷೆಯ ಮೂರು ಗಂಟೆಯ ಅವಧಿಲ್ಲಿ ಬರೆಯುವುದು ಹೇಗೆ ? ಎನ್ನುವುದು ನಿಮ್ಮ ಪ್ರಶ್ನೆ.... ತುಂಬಾ ಸರಳ. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ  1 ಅಂಕದ 15 ಪ್ರಶ್ನೆಗಳಲ್ಲಿ,  10 ಅಂಕಗಳು,  2 ಅಂಕಗಳ 15 ಪ್ರಶ್ನೆ ಗಳಲ್ಲಿ  20 ಅಂಕಗಳು ಇರುತ್ತವೆ.  ಅಂದರೆ 30 ಪ್ರಶ್ನೆ ಗಳಲ್ಲಿ  30 ಅಂಕಗಳು ನಮಗಾಗಿ ! ಇಂಗ್ಲಿಷ್ ಭಾಷೆಯ ಪರೀಕ್ಷೆ ಮುಗಿದ ಮೇಲೆ  ಮೂರು ದಿನಗಳು ನಮ್ಮ ಪರೀಕ್ಷೆ  ತಯಾರಿಗಾಗಿ ಸಿಗುತ್ತವೆ ,ಅಲ್ಲವೆ ? ಅದರಲ್ಲಿ  ಒಂದು ದಿನ ಸಂಪೂರ್ಣ ಒಂದು  ವಾಕ್ಯದ ಮತ್ತು ಎರಡು ವಾಕ್ಯದ ಪಾಠದ ಹಿಂದೆ ಇರುವ ಅಭ್ಯಾಸದ ಪ್ರಶ್ನೆಗಳನ್ನು ಓದಿ ಮನನ ಮಾಡಿಕೊಳ್ಳಿ ಗೊಂದಲವಾದರೆ ತಕ್ಷಣವೇ ನನಗೆ ಪೋನ್ ಮಾಡಿ ಅಂದಾಗ 30 ಅಂಕಗಳು ನಿಮ್ಮ ಖಜಾನೆಗೆ ಬಿದ್ದಂತೆ, ಎರಡನೆಯ ದಿನ  5  ಅಂಕಗಳ ಪ್ರಶ್ನೆಗಳ ಬಗ್ಗೆ ವಿಚಾರ ಮಾಡಿ ಅವುಗಳಾದರೂ ಎಷ್ಟು 10 ಪ್ರಶ್ನೆಗಳಿವೆ ಅಲ್ಲವೆ, ಅದರಲ್ಲಿ ನೀವು ಬರೆಯಬೇಕಾದ ಪ್ರಶ್ನೆ ಗಳು ಎಷ್ಟು ?  ಕೇವಲ 6 ಮಾತ್ರ ಗಡಿ ಬಿಡಿ ಯಲ್ಲಿ ಪ್ರಶ್ನೆ ಆಯ್ಕೆ ಮಾಡಿಕೊಳ್ಳಬೇಡಿ. ಪ್ರಶ್ನೆ ಪತ್ರಿಕೆ ಎಂದಾಗ ಸರಳ,ಮಧ್ಯಮ, ಕಠಿಣ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಹಾಕಿರುತ್ತಾರೆ ಅಂಕಗಳನ್ನು ಗೆಲ್ಲುವ ಕಾಳಗದಲ್ಲಿ 6 ಸರಳವಾಗಿರುವ ಪ್ರಶ್ನೆಗಳನ್ನು  ಗುರುತು ಹಾಕಿಕೊಂಡು ವೇಳೆ ಕಡೆಗೆ ಗಮನವಿಟ್ಟು 6 ಪ್ರಶ್ನೆ ಗಳಿಗೆ 15 ರಿಂದ 20 ಸಾಲು ಬರೆದು ಮುಂದೆ ಹೋಗಿ ಅನವಶ್ಯಕ ವೇಳೆ ಹಾಳು ಮಾಡದೆ 10 ಅಂಕದ ಪ್ರಶ್ನೆ ಕಡೆಗೆ ಸಾಗಿರಿ ಇನ್ನೊಂದು ಮಾತು,  ಒಂದನೆಯ ಅಧ್ಯಾಯದಲ್ಲಿ 5 ಅಂಕದ 5 ಪ್ರಶ್ನೆಗಳು ಇವೆ  ಅದರಲ್ಲಿ  ಒಂದು ಪ್ರಶ್ನೆ ಕಡ್ಡಾಯವಾಗಿ 31 ನೇ ಪ್ರಶ್ನೆಯಲ್ಲಿ  ಕೇಳಿರುತ್ತಾರೆ ಅಂದಾಗ  35 ಅಂಕಗಳು ನಿಮ್ಮ ಖಾತೆಗೆ ಖಂಡಿತವಾಗಿ ಜಮಾ ಆದಂತಾಯಿತು ಅಲ್ಲವೆ ? ಒಂದು ದಿನ ಸಂಪೂರ್ಣ ವಾಗಿ ಇದರ ಕುರಿತಾಗಿ ಚಿಂತಿಸಿ  ಇನ್ನು 41 ನೇ ಪ್ರಶ್ನೆಗೆ ಬರೋಣ ಅದು ನಕ್ಷೆ  ಪ್ರಶ್ನೆ 10 ಅಂಕಗಳು,5 ಅಂಕಗಳು ಗುರುತಿಸಲು, ಅದರ ಇತಿಹಾಸದ ಮಹತ್ವ ಬರೆಯಲು 5 ಅಂಕಗಳು.. ನಿಮಗೆ ಅಭ್ಯಾಸಕ್ಕಾಗಿ ಇರುವ  ಸ್ಥಳಗಳಾದರು ಎಷ್ಟು 20 ,ಈಗಾಗಲೇ ಕ್ಲಾಸ್ ನಲ್ಲಿ ಸಾಕಷ್ಟು ಬಾರಿ ಹೇಳಿ ಆಗಿದೆ ಎರಡು ಮೂರು ಬಾರಿ 15 ನಿಮಿಷ ಒಂದು ನಕ್ಷೆಯಲ್ಲಿ ಗುರುತಿಸಿ ಮನದಟ್ಟು ಮಾಡಿದರೆ 10 ಅಂಕಗಳು  ಖಚಿತ.  ಆವಾಗ ನಿಮ್ಮ ಅಂಕಗಳು 45 ಕ್ಕೆ ಏರಿತು ಅಲ್ಲವೆ !  ವ್ಯಕ್ತಿ ಹಾಗೂ ಆತನ ಸಾಧನೆ ಕುರಿತು ಹೊಂದಿಸಿ ಬರೆಯುವ ಪ್ರಶ್ನೆ ಇರುತ್ತದೆ. ಇವು  ಹಿಂದೆ ಮುಂದೆ ಆಗಿರುತ್ತವೆ ಅದನ್ನು ಸರಿಯಾಗಿ ಹೊಂದಿಸಿ ಬರೆಯಿರಿ 5 ಅಂಕಗಳು ಬಂದವು. ಈಗ ನಿಮ್ಮ ಅಂಕಗಳು 50 . ಇನ್ನು ಕಾಲಾನುಕ್ರಮ ಪ್ರಶ್ನೆ ಪಠ್ಯದಲ್ಲಿರುವ ಸುಮಾರು100 ಘಟನೆ ಗಳನ್ನು  ಮತ್ತು ಅದರ ಕಾಲಗಳನ್ನು ಪಟ್ಟಿ ಮಾಡಿರುತ್ತೀರಾ.... ಅವುಗಳನ್ನು  20 ನಿಮಿಷ ಸೂಕ್ಷ್ಮವಾಗಿ  ಅವಲೋಕನ ಮಾಡಿರಿ ಪ್ರಶ್ನೆ ಪತ್ರಿಕೆಯನ್ನು ತೆಗೆಯುವವರು ಅವುಗಳನ್ನು ಕೇಳುವಾಗ ಅತೀ ಸಮೀಪದ ಅಂತರದಲ್ಲಿ ಕೇಳದೆ  ಮೂರು (ಪ್ರಾಚೀನ, ಮಧ್ಯ ಕಾಲಿನ ,ಆಧುನಿಕ) ಕಾಲದ ಘಟನೆಗಳನ್ನು ಒಳಗೊಂಡಿರುವಂತೆ ಕೇಳಿರುತ್ತಾರೆ ಅವುಗಳಲ್ಲಿ ಘಟನೆ ಗಳನ್ನು  ಸಾ.ಶ.ಪೂ.ಘಟನೆಗಳನ್ನು ಕ್ರಮಾನುತವಾಗಿ ಮೊದಲು  ಬರೆದು ಆನಂತರ  ಸಾ.ಶ.ಘಟನೆಗಳನ್ನು ಬರೆಯಿರಿ.5 ಅಂಕಗಳು ನಿಮ್ಮ ಖಾತೆಗೆ ಜಮಾ, ಈಗ ನಿಮ್ಮ ಅಂಕಗಳು 55 ...! ಓಹೋ... ನೀವು ಇತಿಹಾಸದಲ್ಲಿ ಪ್ರಥಮ ದರ್ಜೆ ವಿದ್ಯಾರ್ಥಿಗಳಾಗಲು ಸಮೀಪವೆ ಬಂದಿದ್ದೀರಿ ! ಇಷ್ಟು ಸಾಕೆ ? ಇನ್ನೂ 45 ಅಂಕಗಳು ಇವೆ. ಅದಕ್ಕಾಗಿ ಇನ್ನೊಂದು ದಿನ ಅಭ್ಯಾಸಕ್ಕಾಗಿ ಬಾಕಿ ಇದೆ ಅದರಲ್ಲಿ 10 ಅಂಕಗಳ ನಾಲ್ಕು ಪ್ರಶ್ನೆ ಗಳಿವೆ ಅದರಲ್ಲಿ ನೀವು ಬರೆಯಬೇಕಾದದ್ದು  ಎರಡು ಪ್ರಶ್ನೆಗಳು ಮಾತ್ರ ಇತಿಹಾಸದಲ್ಲಿ ಮೂರು ವಿಭಾಗಗಳಿವೆ ಅಲ್ಲವೆ? ಹೀಗಾಗಿ ಕನಿಷ್ಠ ಎಂದರೂ ಒಂದು ವಿಭಾಗಕ್ಕೆ ಒಂದು ಪ್ರಶ್ನೆ ಬಂದೆ ಬರುತ್ತದೆ ಹಾಗಾಗಿ ಒಂದು ವಿಭಾಗದ ಹತ್ತು ಅಂಕದ ಪ್ರಶ್ನೆಗಳನ್ನು ಅತ್ಯಂತ ಆಳವಾಗಿ ಓದದೆ ಹೋದರೂ ನಡೆದೀತು... ಎರಡು ವಿಭಾಗದಲ್ಲಿ ಎರಡು ಹತ್ತು ಅಂಕದ ಪ್ರಶ್ನೆ  ಬಂದೆ ಬರುತ್ತವೆ ಅದರಲ್ಲಿ  ನೀವು ಆಳವಾಗಿ ಓದಿದರೆ ಕನಿಷ್ಠ ಒಂದು ಉತ್ತರಕ್ಕೆ 9 ಅಂಕಗಳು ಬರುತ್ತವೆ 9 ×2=18 ಈಗ ನಿಮ್ಮ ಅಂಕಗಳು 45+18=63.... ತೃಪ್ತಿ ಯಾಗಲಾರದು ಇನ್ನೊ 25 ಅಂಕಗಳಿಗಾಗಿ  ಹೋರಾಟ,  ಪರೀಕ್ಷೆ ಪ್ರಾರಂಭ ವಾಗುವವರೆಗೆ ಓದಿದರೆ ಕನಿಷ್ಠ 15 ರಿಂದ 20 ಅಂಕಗಳು ಬರುವಷ್ಟು ಓದಬಹುದು ಅಂದರೆ ನಿಮ್ಮ ಅಂಕಗಳ ನಾಗಾಲೋಟ 90 ರ ಗಡಿಗೆ ಬಂದು ನಿಲ್ಲುತ್ತದೆ. ಆತ್ಮ ವಿಶ್ವಾಸ ದಿಂದ ಬರೆದರೆ ಅಂಕಗಳು ನಿಮ್ಮ ಪದತಲದಲ್ಲಿ ಬಂದು ನಿಲ್ಲುತ್ತವೆ, ಅಲ್ಲವೆ ? ಇತಿಹಾಸವನ್ನು  ಓದುವುದು ಇತಿಹಾಸ  ನಿರ್ಮಿಸಲು  ಎನ್ನವ ಮಾತನ್ನು ನಿಜ ಮಾಡುವುದು ನಿಮ್ಮ ಕೈಯಲ್ಲಿದೆ, ವಿದ್ಯಾರ್ಥಿಗಳೆ ಯಶಸ್ಸು ನಿಮ್ಮ ದಾಗಲಿ.ಶುಭಾಶಯಗಳು 🌷🌷

ಬಸನಗೌಡ ಯ. ಗೌಡರ
ಉಪನ್ಯಾಸಕರು ಬಾಲಕರ ಸ.ಪ.ಪೂ ಕಾ.ಗುಳೇದಗುಡ್ಡ
9480385494

My blog

BYGOUDAR.BLOGSPOT.COM

ಆತ್ಮೀಯ ವಿದ್ಯಾರ್ಥಿಗಳೆ ಮೇಲಿನ ನನ್ನ ಬ್ಲಾಗ್ ನಲ್ಲಿ ದ್ವಿತೀಯ ಪಿಯುಸಿ ಇತಿಹಾಸ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ 10  ಅಂಕಗಳ ಉತ್ತರ ಬರೆಯಲು ಅನುಕೂಲವಾಗಲು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಲಾಗಿದೆ.

1) ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರ.

2) 1885 ರಿಂದ 1920 ರವರೆಗನ ಸ್ವಾತಂತ್ರ್ಯ ಚಳುವಳಿಯ ಹಂತಗಳ ಸಂಕ್ಷಿಪ್ತ ವಿವರಣೆ.

3) ಅಕ್ಬರನ ಸಾಧನೆಗಳ ಸಂಕ್ಷಿಪ್ತ ವಿವರಣೆ. 

4) ಅಶೋಕನ ಜೀವನ ಹಾಗೂ ಸಾಧನೆ ವಿವರಿಸಿ.

ವಿದ್ಯಾರ್ಥಿಗಳ ಅನಿಸಿಕೆ ಅನ್ವಯ ಈ ಪ್ರಶ್ನೆಗಳು ಕಠಿಣ ಎನ್ನುವುದಕ್ಕಾಗಿ ಬರೆಯಲಾಗಿದೆ.

 5 ಅಂಕಗಳ ಪ್ರಶ್ನೆಗಳಲ್ಲಿ 

1)ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ.

2) ಬಸವೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು.

   

Saturday, April 16, 2022

* ಮುಗ್ಧ *

ಹೇಳಿ ಕೇಳಿ ನಾನೊಬ್ಬ ಪೆದ್ದ
ಹೇಳುವರು ನೀನೊಬ್ಬ ಮುಗ್ಧ.
ಇದಕ್ಕೆ ನಾನೂ ಬದ್ದ. 
ಇದರಲ್ಲಿ ನನ್ನದೇನು ತಪ್ಪಿಲ್ಲ ಬಿಡಿ  ?  
" ಬುದ್ದ, ಹಂಗಂದ್ರ ನೀ ದಡ್ಡ ಅಂತ"  
ಖಂಡಿತವಾಗಿಯೂ ಹೌದು.
ಏಕೆ ಹೇಳಿ? ಜಾಣ ಎನ್ನಲು 
ಚನ್ನಾಗಿಯೇ ನಾಟಕ ಮಾಡಬೇಕು.
ಭಾಗಿಸಿ ವಿಭಾಗ ಮಾಡಬೇಕು.  
ನನಗೇನು ಬರತ್ತೇ ಹೇಳಿ ?  
ಇಲಿಗೆ ಹುಲಿ ಎನ್ನಲು ಬರಲ್ಲ. 
ಜಾಲಿ ಮರಕ್ಕೆ ಆಲದ ಮರ 
ಎನ್ನಲು ಬರಲ್ಲ .
ಖಾಲಿ ಜೈಕಾರ ಹಾಕಲು 
ಧ್ವನಿ ಬರಲ್ಲ 
ಸತ್ಯವೆಂಬ ಭೂತವನ್ನು 
ನಿತ್ಯ ಮಾತಿಗಂಟಿಸಿ 
ಹರಿಶ್ಚಂದ್ರ ನಂತೆ ನಡೆದದ್ದೇ ಬಂತು.
ಹೋಗುವದಾದರೂ ಎಲ್ಲಿಗೆ ?  
ಸುಡಗಾಡ...... ಅಲ್ಲವೆ ? 
ಹೀಗಾಗಿ ನಾನೊಬ್ಬ ಪೆದ್ದ ? 
ಯಾವಗಲೂ ನಿಯಮಗಳ ಪಾಲನೆ  
ನಮಗೆಲ್ಲಿದೆ ಪೋಷಣೆ !.
ಮುರಿದವನೆ ಜಾಣ 
ಪಾಲಿಸುವವನೆ ಕೋಣ !
ನಡೆದದ್ದೇ ನಡೆದದ್ದು 
ಮುಟ್ಟಿದೆನೇನು ದಡ !  
ಈಗ ನಿಯಮಗಳೆ ಅದಲು ಬದಲು 
ಮುರಿದ ನಿಯಮಗಳೆ 
ಈಗ ಸಕ್ರಮಗಳು.....
ಹೀಗಾಗಿ ನಾನೊಬ್ಬ ಮುಗ್ಧ !
ನನ್ನಂತೆ ಸಾವಿರ ಸಾವಿರ ಜನ  
ನಾವ್ಯಾರು ಜಾಣರಲ್ಲ, 
ಏಕೆ ಹೇಳಿ ? ಕಿವಿ ಕೇಳುವುದಿಲ್ಲ 
ಕೇಳಿದರೂ ಮಾತು ಬರಲ್ಲ, 
ಬಂದರೂ ನಾವು ಕೂಡಿ ಹೋಗುವುದಿಲ್ಲ 
ಹಾಗಾಗಿ ನಾವೆಲ್ಲಾ ಮುಗ್ಧರು !!!!!!

Friday, April 8, 2022

* ಧರಣಿಯೊಂದುರಿವ ಕೆಂಡ *



ಎನ್ನ ಮನೆಯಂಗಳವಿಂದು 
ಆಗಿದೆ ಮಂಗಳ, ಮುಕ್ಕೋಟಿ 
ದೇವತೆಗಳ ಮಡಿಲಲ್ಲಿ ಕಾಪಿಟ್ಟು 
ಮಲಗಿದ ಗೋಮಾತೆಗಳ
ಆಶ್ರಮವಿಂದು.

* ಧರಣಿಯೊಂದುರಿವ ಕೆಂಡ *

ಧರಣಿಯೊಂದುರಿವ ಕೆಂಡ 
ಹರಿವ ನೀರಿಗೆಲ್ಲಿದೆ ಹೊಂಡ 
ನೆರಳನರಿಸಿ ಬಂದಿವೆ ಹಿಂಡ
ಯಾವ ನೀರೆಯದಿದು ತಂಡ.
 
ಓಡುವ ಕುದುರೆಯೇರಿದ 
ರವಿ, ಅದಕಿಲ್ಲ ತಡಿ,ಧರೆಯ 
ತುಂಬೆಲ್ಲಾ ಬೆಂಕಿಯ ಕಿಡಿ.
ನಂಬಿ ನೆರಳರಸಿದೆ ಹಿಂಡು.

ನೇಸರನ ಬಿಸಿಯುಸುರಿಗೆ 
ಆಸರೆಯ ಹುಡುಕುತಲಿ 
ಕಾಶಿಯ ಯಾತ್ರೆಗೆ ಬಂದಂತೆ 
ಹಸುಗಳ ರಾಶಿಯ ದಂಡು.

ಹೊಂಗೆ ತೆಂಗು ಜೊತೆಯಾಗಿ 
ಅಂಗಳದಿ ಮಂಟಪ ಮಾಡಿ 
ಭಂಗ ಬರದಂತೆ ಭೃಂಗಗಳ 
ಗಂಧರ್ವ ಲೋಕಧರೆಗಿಂದು.

ಮಾತು ಮಾತಿಗೆ ಸೋಲದ
ಜೋತು ಬೀಳುವ ನಾಕ ನರಕದ 
ಚಿಂತನ, ಯಾತರ ಗೊಡವೆಗಳಿಲ್ಲ
ಸೋತು ಗೆದ್ದ ಗೋವುಗಳ ತಂಡ.

Sunday, April 3, 2022

* ಇಣುಕಿ ತಿಣಕಬೇಡ ಸಣಕ *



ಸಾಕು ಮಾಡೋಣವೆ 
ಇಣುಕಿ ನೋಡಿ ತಿಣಕುವ ಪರಿ ಒಮ್ಮೆ !
ಅಂದೊಮ್ಮೆ ಹೀಗಳೆದಿದ್ದೆ 
ಓದದೆ ನಗುವವರನೊಮ್ಮೆ . 
ಆಶಾಗೋಪುರವ ಕಟ್ಟಿ 
ಅದಕ್ಕೆ ಏಣಿ ಇಟ್ಟು 
ಏರಿ ಏರಿ ಬಿದ್ದವರ ಕಂಡು 
ಮರುಗಿದೆನೊಮ್ಮೆ ..
ಪಾಪ ಏನು ತಾಪತ್ರಯಗಳೊ ಏನೋ 
ಹೀಗಾಗಿದೆ ಎಂದು ! 
ಈಗೀಗ ಎಲ್ಲರೂ ಹೀಗೆ 
ನಡು ದಾರಿಯಲ್ಲಿ ನಗುವರು 
ಒಮ್ಮೊಮ್ಮೆ ,ಅಳುವರು ಇನ್ನೊಮ್ಮೆ .
ಎಲ್ಲೊ ಮಾಡಿದ ಟಿಕ್ ಟಾಕ್ 
ಇವರ ಮನಸ್ಸಿಗೆ ಆಗಿದೆ ಅಟ್ಯಾಕ್ !
ಗೋಲಿ ಆಡಬೇಕಾದ ಹುಡುಗರಿಂದ 
ಅಬಾಲ ವೃದ್ದರವರೆಗೆ
ಹಿಡಿದಿದೆ ಹಣಕಿ ಹಾಕುವ ರೋಗ .
ಗುಣಪಡಿಸಲು ಬೇಕು ಯಾಗ .
ಬೇಕಿಲ್ಲ ಕುರಿ ಕೋಳಿ 
ಹಸು,ಹವಿಸ್ಸು, ತುಪ್ಪ .
ಓದಬೇಕು ಸರಿ ದಾರಿ 
ತೋರುವ ಸಾಹಿತ್ಯ ಬೆಪ್ಪಾ 
ಹುರಿದು ಮುಕ್ಕುತಿವೆ 
ಬಿಟ್ಟಿ ಡಾಟಾ...., 
ಬಂದುದೆ ತಪ್ಪಾ ? 
ಪಕ್ಕದಲ್ಲಿ ಪವಡಿಸಿದಾಗ 
ಇರದ ಪ್ರೀತಿಯ ಲೆಕ್ಕ 
ಈಗ ನಡೆದಿದೆ ದಿನ ನಿತ್ಯ 
ಹೊರಹಾಕುವರು ಪಕ್ಕಾ
ಬಂಧು ಬಾಂದವರ 
ಸಂಬಂಧದ ಬಂಧನವಿಲ್ಲ 
ತಂದು ಹಾಕುವ ತಂದೆ ತಾಯಂದಿರಿಗೂ 
ಆನ್ಲೈನ್ ಪಾಠದ ಸಿದ್ಧ ಉತ್ತರ 
ಅಧುನಿಕತೆಯ ಸೋಗಿನಲ್ಲಿ 
ಬದುವು ದಾಟಿದರೇನೋ ಇಲ್ಲಿ .
ಬಾಗಿಸಲು ಗುರುಗಳ ಕರಗಳಿಗೆ 
ಇರಬೇಕೇನೋ ಪ್ರೀತಿಯಿಂದ ಸಲಾಕೆ ? 
ಇಲ್ಲದಿದ್ದರೆ ಆರಕ್ಷಕರ ಕರಗಳಿಗೆ 
ಕರ್ತವ್ಯ ಬರಬಹುದೇನೋ ಜೋಕೆ ?

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...