ಬದುಕೊಂದು ಬವಣೆಯ ದೋಣಿ
ಇದಕಿಲ್ಲ ಕೊನೆ, ಹಾಕಿಹರು ಮಣೆ
ಮಧು..ವಿಗೊ,ಮದಿರೆಗೊ ವಧುವಿನ
ಮದುವೆಗೆ ನಡೆದಿದೆ ಸಡಗರದ ಪಯಣ !!
ಚದುರಿದಾ ಮೋಡಗಳಂಬರದ
ಮಡಿಲಲ್ಲಿ ಚಿತ್ತಾರದ ಚಂದ್ರಮ
ಹಾಲಿನಂತಹ ನೊರೆ ಬೆಳದಿಂಗಳ
ನೋಡಲೆರಡು ಸೋತಿವೆ ನಯನ!!
ಬಾಚಿ ತಬ್ಬಲು ಹೀಚು ಕಾಯಿಗಳು
ಕಚುಗಳಿಯಿಡುವ ಕನ್ಯೆಯರಿವರು
ಶಶಿಧರನಂಗಳದ ಈ ಚಿಕ್ಕಿಗಳಾ ಹಿಂಡು
ನಶೆಯೇರಿಸಿ ನೀಡಿದವು ಹೊಸ ಚುಂಬನ !!
ಶರಧಿಯ ಸಮ್ಮೋಹನಕರಳಿದ ರವಿ
ವರದಿಯ ನೀಡಲು ಬಂತು ಹೊಂಬಣ್ಣ
ಉಷೆಯಲ್ಲರಳಿದ ನಸು ಗೆಂಪಿನ
ಹಸಿಹಸಿ ಕನಸುಗಳಾ.. ಆಲಿಂಗನ !!
ದಡ ತಲುಪಿ ಕುಣಿಯಿತು ಮನ
ಹೆಡೆಯೆತ್ತಿದೆ ಉರಗ ಗುಣ
ತಲುಪಿದ್ದು ದ್ವೀಪ ಅಲ್ಲಿಲ್ಲ ದೀಪ
ಮಲೆತು ಕತ್ತಲೆಯೊಂದಾಗಿದೆ ಶಾಪ !!
🖋 ಬಸನಗೌಡ ಗೌಡರ
No comments:
Post a Comment