Monday, September 5, 2022

* ಹೀಗೊಂದು ಬೆಂಗಳೂರು ಪಯಣ *


          
            ಬೆಂದು, ನೊಂದು ಬಂದವರಿಗೊಂದು ಬದುಕು ನೀಡುವ ಬೆಂದಕಾಳೂರು .ಬೆಂಗಳೂರು ಅದು ನಿಜವಾಗಿಯೂ ಜ್ಞಾನ ಇದ್ದವರಿಗೆ 
ಅವಕಾಶಗಳ ಬಾಗಿಲು, ಜಗತ್ತಿನ ಕುತೂಹಲದ ಕೇಂದ್ರ. ದಿನ ಬೆಳಗಾದರೆ ಲಕ್ಷಾಂತರ ಜನರು ಬರುವ ಹೋಗುವ ಜನಜಂಗಳಿಯ ನಿತ್ಯ ಜಾತ್ರೆ, ಹಣ ಸಂಪಾದಿಸಿದವರ, ಸಂಪಾದಿಸಲು ಅರ್ಹತೆ ಹೊಂದಿದವರ ಉತ್ಸವದ ಮಂದಿರ. ಈ
ಮಂದಿರದ ನೆಲ ಸ್ಪರ್ಶಿಸುವ ಅವಕಾಶ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಗೂಂದು ಗೌರವದ ನಮನ . ನಿರಂತರ ಪಾಠದ  ಬರುವ ಮೌಲ್ಯಮಾಪನದ  ಗೌರವಯುತ ಕರ್ತವ್ಯದ ಆದೇಶ ಬಂದಾಗ ನಮಗೆಲ್ಲಾ ಪುಳಕ ಮತ್ತೊಂದು ಸಾರೆ ಬೆಂಗಳೂರು ಸುತ್ತಿ ಬರುವ ಸದವಕಾಶ ಮೂರು ದಿನಗಳ ಮುಂಚೆಯೇ ತಯಾರಿ .ಅದರ ಸೆಳೆತವೆ ಹಾಗೆ ಒಂದು ಕಡೆ ಗಾಂಧೀಜಿ ಹೇಳುತ್ತಾರೆ " ಕೆಲಸದ ಬದಲಾವಣೆಯೆ ವಿಶ್ರಾಂತಿ " ಇದು ನಿಜವಾಗಿಯೂ ಸತ್ಯದ ಮಾತು. ಮೊದಲೆ ಸತ್ಯದ ಪ್ರತಿಪಾದಕ ಅಂಹಿಂಸೆಯ ಬೆಂಬಲಿಗ ಅವರ ಪಾಲನೆಯಲ್ಲೂ  ನನಗಂತೂ ಸಂತಸ. ಪಾಲನೆಗೆ ಸಂತೃಪ್ತಿ... ಅಷ್ಟೆ ಸತ್ಯ .ಆದರೂ ವಿರೋಧಿಸುವ ಜನರಿರಬಹುದೇನೋ ಅದು ಅವರವರಿಗೆ ಬಿಟ್ಟ ವಿಷಯ ಬಿಡಿ. ಅದನ್ನು ನಾವೇಕೆ ತೆಲೆಕೆಡಿಸಿಕೊಳ್ಳಬೇಕು ಹೇಳಿ .ಇರಲಿ ಆಗಸ್ಟ್ ಒಂದರ ಸಂಜೆಯ ಪಂಚ ಸ್ನೇಹಿತರ ಮುಖಂಡ ವಿಠ್ಠಲ ಕಳಸಾ ರ ಮುಂದಾಲೋಚನೆಯು ನಮ್ಮ ತಂಡವನ್ನು ಗೋಲಗುಂಬಜ ಎಕ್ಸ್  ಪ್ರೆಸ್ ಮುಂದೆ ತಂದು ನಿಲ್ಲಿಸಿತು, ಐದು ಜನ ಉಪನ್ಯಾಸಕರು ಹರಟೆ ಹೊಡೆಯಲು ಮಜಾ ಉಡಾಯಿಸುವ ಈ ಸಂದರ್ಭಕ್ಕಿಂತ  ಇನ್ನೊಂದು ಸಂದರ್ಭ ಯಾವಾಗ ಸಿಗುತ್ತೆ ಹೇಳಿ ?  ಅರ್ಧಗಂಟೆ ಮೊದಲೆ  ನಿಲ್ದಾಣಕ್ಕೆ  ಆಗಮಿಸಿದ ನಮಗೆ ನಾವು ಏರುವ ರಿಜರ್ವ್ ಬೋಗಿ  ಎಲ್ಲಿ ನಿಲ್ಲುತ್ತದೆ ಎನ್ನುವ ತರ್ಕದ ವಿತಂಡವಾದಗಳೇ  ಎಸ್ 1..2..3 .. ಬೋಗಿ ಎಲ್ಲಿ ನಿಲ್ಲುತ್ತದೆ ಒಂದು ಪ್ರಾರಂಭವಾಗುವುದು ಇಂಜಿನ್ ಕಡೆಯಿಂದನಾ ಅಥವಾ ರೈಲಿನ ಹಿಂದುಗಡೆ ಯಿಂದ ನಂಬರಗಳು ಮುಂದುವರಿಯುತ್ತವಾ ಎನ್ನುವ  ಜಿಜ್ಞಾಸೆ ಯಾಕೆಂದರೆ ಮತ್ತೆ ಮತ್ತೆ ಅದೆ ರೈಲುಗಳಲ್ಲಿ ಪ್ರಯಾಣಿಸದ್ದರೆ ತಾನೆ ಸರಿಯಾಗಿ ಹೇಳಲು ಸಾಧ್ಯ ಆ ಕಾಲ ಬಂದೆ ಬಿಟ್ಟಿತು...
ಚುಕ್ ಬುಕ್, ಚುಕ್ ಬುಕ್ ರೈಲು ಬಂಡಿ ಗಾಳಿಯ ವೇಗದಲ್ಲಿ ಬಂದು ಮಾತಿಗೆ ತೆರೆ ಎಳೆಯಿತು.ಆದರೆ ಹತ್ತುವುದೊಂದೆ ಬಾಕಿ  ಟ್ರೈನ ಒಳಗಡೆ ಯುದ್ಧಕ್ಕೆ ಸಿದ್ದರಾಗಿ ನಿಂತ ಸೈನಿಕರಂತಿದ್ದ ಉಪನ್ಯಾಸಕರ ದಂಡು. ಮೌಲ್ಯಮಾಪನಕ್ಕೆ ಬಾಗಲಕೋಟೆಯಿಂದ ಟ್ರೈನ ಹತ್ತಿ ತೆಂಕಣಕ್ಕೆ ಮುಖ ಮಾಡಿತ್ತು .ಅಪರೂಪಕ್ಕೊಮ್ಮೆ ಭೇಟಿಯಾಗಿ ಕುಶಲೋಪರಿ ವಿನಿಮೆಯ ಮಾಡಕೊಳ್ಳುವ ಸ್ನೇಹಿತರು ಇಂದು ಮೌಲ್ಯಮಾಪನ ನೆವದಲ್ಲಿ ಬಹು ವೇಳೆ ನಾವೆಲ್ಲಾ ಕೊಂಡಿಯ ಬಂಡಿಯ ಬಂಧನದಲ್ಲಿ. ರಾಜಧಾನಿಗೆ ತೆರಳುವವರಿಗೆ ಹೊಸೆದು ಮಾತುಗಳನ್ನಾಡಿ ಹುಸಿ ನಗೆ ಬುಗ್ಗೆ ಎಬ್ಬಿಸುವ ಪರಿ ಹುರಿಗಡಲೆ. ಅದು ಒಮ್ಮೆ ಪಂಪನ ಕಡೆ ತಿರುಗಿದರೆ ಇನ್ನೂಮ್ಮೆ ಐನ್ ಸ್ಟೀನ್ ಮಗದೂಮ್ಮೆ ನಗೆ ಬುಗ್ಗೆ ಎಬ್ಬಿಸುವ ಬೀಚಿ ಪ್ರಾಣೇಶ್ ಕಡೆಗೆ, ರೈಲು ಕತ್ತಲೆಯನ್ನು ಸೀಳುತ್ತಾ ರಣ ವೇಗದಲ್ಲಿ ಓಡುತ್ತಿದ್ದರೆ ಗಣಿತ ಮಾಸ್ತರ ತಲೆಯಲ್ಲೆ ಆಹಾ.. ಸಾಪೇಕ್ಷೆ ಸಿದ್ದಾಂತ ನಾವು ಚಲಿಸುತ್ತಿದ್ದೇವೆ ಎಂದು ರುಜುವಾತು ಮಾಡಲು ಇನ್ನೊಂದು ರೈಲು ಸಾಪೇಕ್ಷವಾಗಿ ಚಲಿಸುವ ಅರಿವು. ಇದನ್ನು ಮಕ್ಕಳಿಗೆ ಅರ್ಥ ಮಾಡಿಸುವದು ತುಂಬಾ ಕಷ್ಟದ ಕೆಲಸ ಎನ್ನಬೇಕೆ ? ಅದಕ್ಕೆ ಭೌತಶಾಸ್ತ್ರದ ಉಪನ್ಯಾಸಕರ ತಮ್ಮ ಅನುಭವವನ್ನು ಹೊರ ಹಾಕಿದ ರೀತಿ ಇನ್ನೊಂದು ರೀತಿ ಸರ್ ಈಗ ನಾವು ನಿಶ್ಚಲ ಸ್ಥಿತಿಯಲ್ಲಿ ಇದ್ದೇವೆ ನಮ್ಮ ಗಾಡಿ ಚಲಿಸಿದಾಗ ಹೊರಗಿನವರಿಗೆ ನಾವು ಚಲನಾ ಸ್ಥಿತಿಯಲ್ಲಿರುತ್ತೇವೆ. ಅಂದರೆ ನಾವು ಹೊರಗಿನಿಂದ ನೋಡುವವರಿಗೆ ಚಲಿಸುತ್ತಿದ್ದೇವೆ ಎನ್ನಬೇಕೆ ! ಇತಿಹಾಸ ಮತ್ತು ಭೂಗೋಳ ಓದಿದ ನನಗೆ ಸಾಪೇಕ್ಷ ಸಿದ್ಧಾಂತ ತಿಳುವಳಿಕೆ ಅಷ್ಟಕ್ಕಷ್ಟೆ, ಆದರೆ ಇತಿಹಾಸ ಪಾಠ ಮಾಡುವಾಗ ಮಾತ್ರ ಇತಿಹಾಸ ಪಾಠ ತಿಳಿಯಲು ವಿದ್ಯಾರ್ಥಿಗಳಿಗೆ ನನಗೆ ತಿಳಿದ ನನ್ನದೆ ಶೈಲಿಯ ನನ್ನದೆ ಸಾಪೇಕ್ಷ ಸಿದ್ಧಾಂತ ?  ಒಂದು ಪಾಠವನ್ನ ಇನ್ನೊಂದು ಪಾಠಕ್ಕೆ ಹೋಲಿಕೆ ಮಾಡಿಯೇ ಕಲಿಯಲು ಹೇಳುವುದು, ಅಂದರೆ ಸಿಂಧೂ ನಾಗರಿಕತೆ ತಿಳಿಯಲು ವೈದಕ ಸಂಸ್ಕೃತಿ,ಚಾಲುಕ್ಯರ ಪಾಠ ತಿಳಿಯಲು ಗುಪ್ತರ ಸಾಮ್ರಾಜ್ಯ, ಗ್ರೀಕ ನಾಗರಿಕತೆ ತಿಳಿಯಲು ರೋಮ ನಾಗರಿಕತೆ...ನನ್ನ ಇತಿಹಾಸ ಪಾಠದ ತಂತ್ರ ಯಂತ್ರದಂತೆ ತಿರುಗುತ್ತಿದ್ದರೆ. ಗೋಲಗುಂಬಜ್ ಟ್ರೈನ  ಗದಗ್ ಹಿಂದೆ ಸರಿಸಿ ಮುಂದಕ್ಕೆ ಸಾಗುತ್ತಿತ್ತು ಒಬ್ಬೊಬ್ಬರಾಗಿ ನಿದ್ರಾದೇವಿಗೆ ಬಲಿಯಾಗಿದ್ದರು ಅದರೆ ಅವರು ಬಿಡುಗಡೆಯಾಗಿದ್ದು ತುಮಕೂರು ಬಂದ ಮೇಲೆಯೇ ಯಾಕೆಂದರೆ ಅದು ಬೆಂಗಳೂರು ರೈಲು. ನಾವು ಎಚ್ಚರವಾಗಿದ್ದು ನಿತ್ಯ ಬಹು ಪ್ರಯಾಣಿಕರ ಪ್ರವಾಸದ ಮಹಿಮೆ ಅವರ ಮತ್ತು ರೈಲೆನ ಸಂಬಂಧ ನೀರು ಮೀನಿನ ಸಂಬಂಧ.
ಇರಲಿ ಯಾವಾಗಾದರೊಮ್ಮ ಬಂದು ಹೋಗುವ ಬಡಪಾಯಿ ಪ್ರವಾಸಿಗರಿಗೆ ಬೆಂಗಳೂರು ರೈಲು ನಿಲ್ದಾಣ ಬಂಗಾರದಂತ ಸ್ವಾಗತ ನೀಡೀತು, ದಾರಿಯುದ್ದಕ್ಕೂ ಇರುವೆಗಳಂತೆ ಸರಸರನೆ ಸಾಲಾಗಿ ಸರಿದು ಹೋಗುವ ಯಂತ್ರ ಮಾನವರ ತಾಂತ್ರಿಕ ಬದುಕಿನ ಅನಾವರಣ.ಪ್ರತಿಯೊಂದಕ್ಕೂ ದಾವಂತ ಎರಡು ಮೂರು ದಿನದ ಎಲ್ಲಾ ತಯಾರಿಯ ಸರಂಜಾಮ ಎಲ್ಲಿ ಇಡುವುದು ? ಬಸ್ ನಿಲ್ದಾಣದ ಸಮೀಪದ ಪಂಚವಟಿ  ಲಾಡ್ಜನಲ್ಲಿ ದೇಹದ ಹೊರಗಿನ ಮತ್ತು ಒಳಗಿನ ಬಾರ ಇಳಿಸಿ.ಬಸವಳಿದು ಬಸ್ಸು ಏರಿ ಇಳದಾಗಲೆ ಗೂಗಲ್ನಲ್ಲಿ ನೋಡಿದ ಮೆಜೆಸ್ಟಿಕ್ ನಿಂದ ಆಚಾರ್ಯ ಪಾಠ ಶಾಲೆ ಪಿಯುಸಿ ಕಾಲೇಜು 6 ಕಿ.ಮಿ ದಾರಿ ತಲುಪಲು ಒಂದು ಗಂಟೆ ಬೇಕೆಂದು ಅರಿವಾಗಿದ್ದು? ....ಮತ್ತೆ  ಮುಂದುವರೆಯಲು...? ಶುಭ ರಾತ್ರಿ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...