ನಿಂತಿಹಳು ಹಾನಾಪೂರದ ಹಾಲಹಂಡೆ
ಕಂಡು ಸಂತಸ ಪಡು ನೀ ಮಳೆಗಾಲದಂದು
ಫೀ ಇಲ್ಲ, ಪೇ ಮಾಡಬೇಕಿಲ್ಲ ಪಳಾರದ ಹಂಗಿಲ್ಲ
ನಿಷ್ಕಲ್ಮಷ ಮನಸ್ಸೆ ನಿನ್ನೂಲುವಿನಾ ಪೂಜೆ ಇವಳಿಗೆ ॥
ನಿಜ ಭಾವದಾಲಪವೆ ಭಜನೆ ಆ ಬಯಲಿಗೆ !
ತಂದು ಸುರಿಯಿರಿ ನಿಮ್ಮ ಗೊಜಲು ಗೊಂದಲ
ತಿಂದು ಜೀರ್ಣೀಸುವ ಶಕ್ತಿ ಯುಂಟು
ಈ ಹಸಿರು ಹೊದ್ದ ಹೊಂಗೆ ಮರದ ಬಾಲೆಗೆ !
ಮೂವತ್ತು ಅಡಿಗಳ ಮೇಲಿನಿಂದಿವಳ ನರ್ತನ
ಜುಳು ಜುಳು ನಾದವೆ ಇವಳ ಕೀರ್ತನೆ.
ಅಪ್ಪಳಿಸಿ ಹಾರುವ ಹನಿಗಳೆ
ಮಂತ್ರಾಕ್ಷತೆ ಈ ಮದುವನಗಿತ್ತಿಗೆ !
ಅಂದು ದನಮೇಯಿಸಲೋದ ನನ್ನಕ್ಕತಂಗಿ
ಮೈಮರೆತು ಮೆಟ್ಟಿನಿಂತರು ಪಡುವನ ದಿಕ್ಕಿಗೆ
ಹೊತ್ತು ಜಾರಿ ಕತ್ತಲಾವರಿಸಿ
ಚಿತ್ತಕಳೆದುಕೊಂಡರಲ್ಲಿ ।
ಮಾಹಾಮಳೆಯು ಬೆಂಬತ್ತಿ
ಬಂಡೆಗಲ್ಲಿಗೆ ಹೆದರಿ
ಹಾವಾಗಿ ಹರಿದಳು ಮಾಯಾವಿ
ಈ ವೈಯಾರಗಿತ್ತಿ ।
ಪಡಿಯ ನಡು ನಡುವೆ ನಡಿಗೆ ರೌದ್ರಾವತಾರ।
ಹಿಡಿದು ನೂಕಲು ಸಜ್ಜಾದಳು ಯಮರೂಪಿ॥
ಮೇಯಿಸಿದ ರಾಸು ಮನೆತಲುಪಿದಾಗ
ಮನವೆಲ್ಲ ಗಲಿಬಿಲಿ, ಮನೆಯ ಕರೆಯೇ
ಮರಣ ಮೃದಂಗದ ಬಲೆ !
ದಾಟಲೆಲ್ಲಿದೆ ಕಾಲಿನಲ್ಲಿ ಶಕ್ತಿ !
ಮೆಲ್ಲ ಮೆಲ್ಲನೆ ಒಂದಾಗಿ
ಓಡಿದರು ..ಓಡಿದರು.. ನಾವು ತಲುಪದ
ನಕ್ಷತ್ರ ವಾವಾಗುವ ಅನಂತ ದಾರಿಗೆ.॥