Saturday, November 27, 2021

* ಅನ್ನವೆ ದೇವರು *-

ಅನ್ನದ ಬೆಲೆ ಅರಿತ
ನನ್ನ ಸ್ವಾನುಭವಕ್ಕೆ
ಎನ್ನ ಕೋಟಿ ನಮನ /
ಭಿನ್ನ ಬೇಡ ಅನ್ನವೆ ದೇವರು 
ಅನ್ನ ನೀಡುವ ಕರಗಳೆ 
ಕೈಲಾಸದ ಹಿಮಗಿರಿ//

ಕಾಶಿ ರಾಮೇಶ್ವರ ಉದರ 
ಭಾಷೆ ಒಂದೆ ಅರ್ಥವಾಗವ 
ಇರದೆ ಇದ್ದರೆ ಹೇಳಿ ನಗುವ/
ಸೇರುವ ಅನ್ನದ ಕಣ ಕಣಗಳಲ್ಲಿ 
ಸೇರಿದೆ ನಿನ್ನ ನಿಜ ನಾಮಾಕ್ಷರ
ಕರೆದು ಕಲಿಸು ಬೀಜಾಕ್ಷರ//

ದುಡಿದು ತಿನ್ನುವ ಅನ್ನ 
ಬೆಲೆಗೆ ಮೀರೀದಾ ಹೊನ್ನು 
ಬಲವ ಪಡೆವ ಗೆಲುವಿಗೆ   
ಹರ ನಾಮ ಉಸಿರು ಕಣ್ಣು
ದುಡಿಯದೆ ಪಡೆವ ಅನ್ನ 
ದರಿದ್ರ ಬಾಯಿಗೆ ಮಣ್ಣು//

ನೀಡಿದ ಮಹಾ ಕರಗಳು 
ನಾಡ ಅಭಯ ದೊರೆಗಳು/
ದುಡಿಯದೆ  ಹೀರುತಿವೆ 
ಗಿಡದಿ ಅಡಗಿದ ಗಡವಗಳು
ಕಾಡಿನಲ್ಲಿ ಉಳಿಯುವ 
ಜಡ ತಲೆಮಾರುಗಳು //

ಮಣ್ಣಿನಲ್ಲಿ ಅನ್ನ ಮರೆತು 
ಮನೆಯಲ್ಲಿ ಹುಡುಕುತಿರುವೆ
ತನ್ನವರೆಲ್ಲಿಹರು ತಿಳಿಯದೆ/ 
ಎನ್ನ ಬೆವರು ಹನಿಯ ಕಣ 
ಪೂಜೆಗಿಂತ ಮಿಗಿಲು ಧನ 
ಬನ್ನಿ ತರುವ ಹೊಸತನ//

Tuesday, November 23, 2021

* ಅಂದು -ಇಂದು *

ಮದುವೆಯ ವೈಭವ 
ಮೆದುವಾಗಿ ಹೇಳುವೆ ಅಣ್ಣ
ಮೆದುಳಿಗೆ ಇಳಿದು
ವಿದಳನ ತಲೆಯಲ್ಲಿ
ನಡೆದಿದೆ ಅಣ್ಣ //

ಅಂದು ಹಲಗೆ ಮಜಲಿಗೆ 
ಚುರುಮರಿಗಳೆ ವರುಣ/
ಕುಣಿದು ಬಡಿದವಣಿಗೆ 
ಹಣದ ಹಾರವೆ ಆಭರಣ /
ಮುಂದೆ ಸಾಗಿತ್ತು ಶಹನಾಯಿ 
ಜಾಗ್ರತೆಯ ವಾಹನ // 

ಇಂದೂ ಸೇರುವರು 
ಸಾಗರದಂತೆ ಜನ 
ಡಿ ಜೆ ಸದ್ದಿಗೆ ಸಮೂಹವೆ ರಣ ರಣ
ಇವರಿಗಿದೆಯೆ ಸಂತೃಪ್ತಿ ಮನ
ತಿಳಿಯವಲ್ಲದು ಸಂಕಲನ //

ಅಪ್ಪ ಅಮ್ಮ ತಿಪ್ಪರಲಾಗ ಹಾಕಿ 
ಚಪ್ಪರದಲ್ಲಿ ಮದುವೆ
ಮಾಡಿದರಣ್ಣ
ವರಮಹಾಶಯ ಮರು
ಮಾತನಾಡದೆ ಹಾಕಿದ ಮೂರು 
ಗಂಟು ಅಣ್ಣ
ಇನ್ನೂ ಬಿಚ್ಚಿಲ್ಲ 
ಆ ಕಗ್ಗಂಟು ತಮ್ಮಣ್ಣ

ಹಲ್ಲು ಕಿಸಿದು ಹುಲ್ಲಿಗೆ  
ಓಡಿದ ತಿಮ್ಮಣ್ಣ
ಹಸಿದ ಹೋರಿಯಂಗ /
ಸೋಸಿ ನೋಡದೆ 
ಸೊಸೆ ಆದಳು 
ಸಿರಿದೇವಿಯಂಗ /
ಸಾಲಿನಲ್ಲಿ ಇರು ಅಂದರ ಸಿಡುಕಿ 
ನಡೆದಳು ಹೆಮ್ಮಾರಿ 
ಸೌದಿ ಉರಿದಾಂಗ //

ಸಾಲಾಗಿ ಕುಳಿತರೆ ಸಡಗರದಿಂದ 
ಬಡಿಸುವರಣ್ಣ 
ಇವರು ಹಳೆಯ ಕಾಲದ 
ಹುಡುಗರಣ್ಣ 
ಬಾಳೆ ಪತ್ರೊಳಿ ಮೇಲೆ
ಸಜ್ಜಕ  ಅನ್ನ
ಹಳೆಯ ಊಟ ಸಂತೃಪ್ತಿಯೆ 
ಪರಮಾನ್ನ/
ಪ್ರೀತಿಗೆ ಬರ ಹೇಗೆ 
ಬರುತ್ತೆ ಹೇಳಣ್ಣ//

ಅಕ್ಷರ ಕಲಿತವರು 
ಅಕ್ಷತೆಗೆ ಬರುವರಣ್ಣ
ಸಾಕ್ಷರತೆಯ ಮದುವೆ 
ತಂದಾರಣ್ಣ
ಬಕ್ಷ ಬೋಜ್ಯಗಳಿಗೆ 
ಸಿರಿವಂತರಣ್ಣ
ಭಿಕ್ಷುಕರಂತೆ ನಿಂತೆ 
ತಿನ್ನುವರಣ್ಣ //

Sunday, November 21, 2021

* ಕಟ್ಟುವೆವು ನಾವು *


ಕಟ್ಟುವೆವು ಕನಕ ಕಟ್ಟಿದ 
ಕನಸಿನ ನಾಡೊಂದನು /
ಮನುಕುಲದ ಬೀಡೊಂದನು
ವರ್ಗವಿಲ್ಲದ ವರ್ಣವಿಲ್ಲದ  
ಸ್ವರ್ಗದ ನಾಡೊಂದನು//

ಬಸವಕಲ್ಯಾಣ, ಬಾಡದ 
ಶರಣ ದಾಸರ ಸಂತತಿಯ
ಮಾನವತೆ ನಾಡೊಂದನು/ 
ಹೊಸೆದು ತೀಡಿ ಕಟ್ಟುವೆವು
ಬಸವ ನಾಡೊಂದನು//

ಬುದ್ಧ ಬಸವ ದಾಸ ಶ್ರೇಷ್ಠ 
ಶುದ್ಧ ಭಾವದ ನಾಡೊಂದನು/
ರವಿ ಕಾಣದ ಜಗವ ಸೇರಿ
ಜಿಡ್ಡು ತೊಳೆದು ಕಟ್ಟುವೆವು 
ರಾಗಿಯ ನಾಡೊಂದನು //

ವಿಜಯನಗರ ವೈಭವ ಮತ್ತೆ 
ಮರಳಿ ಅರಳುವ ನಾಡೊಂದನು/
ಹರಿ ಕೃಷ್ಣ ನಾಮ ಸ್ಮರಣೆಯ 
ದಾಸ ಸಾಹಿತ್ಯ ಸಂಭ್ರಮದ 
ಸಂಗೀತ ನಾಡೊಂದನು//

ಕದವಿಲ್ಲದ ಕದನವಿಲ್ಲದ
ಶಾಂತಿ ಸಮೃದ್ಧಿಯ ನಾಡೊಂದನು/
ಭ್ರಾಂತಿ ಮೀರಿದ, ಆಧ್ಯಾತ್ಮದ 
ಅನುಭೂತಿಯ ಅಮರತ್ವದ 
ಸಾಮರಸ್ಯದ ನಾಡೊಂದನು//

ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ

Saturday, November 20, 2021

ಗಿಣಿ ಮಾತು

ಬೇಡ ನರನೆ ನಮಗೆ ಮೋಡಿ
ಬರಹ ವಿಲ್ಲದ ಬರಿಮಾತು ನೋಡಿ
ವಿರಹ ತಂದಿದೆ ಬಡಿವಾರ ಬೇಡ 
ಶರಣರ ಮಾತೊಂದಿದ್ದರೆ ಸಾಕು 
ಬುರುಡೆ ನಮಗೆ ಬೇಡವೆ ಬೇಡ//

ಅನ್ನವಿಡದೆ ಬರಿ ಬಣ್ಣಿಸುವ ಮಾತು
ಹೊನ್ನಶೂಲಕೇರಿಸದೆ ಹೇಗಿದ್ದೀತು  
ಹುನ್ನಾರವಿದು ಕಣ್ಣೀರು ತಂದೀತು 
ತನ್ನವರ ಉದರ ತುಂಬದ ಮಾತು 
ಇನ್ನಾರಿಗೂ ಬೇಡವೆ ಬೇಡ // 

ಸಮಾನತೆಯಿಲ್ಲದ ಸನ್ಮಾನ ಬೇಡ  
ಬಹುಮಾನದಲ್ಲಿ ಅವಮಾನ ಬೇಡ
ತೆಂಗು ಮಾವು ಪೊಟರೆ ಸಾಕು 
ಹಂಗಿನ ಅರಮನೆಯ ವೈಭವ 
ನಮಗೆ ಬೇಡವೆ ಬೇಡ//
 
ಗಂಗೆ ತುಂಗೆ ಜಲ ಕೊಳಚೆ ಮಾಡಿ 
ಪವಿತ್ರವೆಂಬ ಪುಂಗಿ ನಮಗೆ ಬೇಡ 
ಜಂಗಮ ಪಾದೋದಕ ನುಂಗಿ 
ರೋಗ ಹೊಂದುವುದು ಸಾಕು
ರಾಗ ಬದಲಿಸು ಹಾಡಬೇಡ//

Thursday, November 18, 2021

* ಮನಸ್ಸು ಕದ್ದ ಕಳ್ಳಿ*


ನಾ ನಡೆವ ದಾರಿಯಲ್ಲಿ
ನೀ ಮುಳ್ಳಿನ ಹಾಸಿಗೆಯ ತಳ್ಳಿ
ಮರೆತು ಹೋದೆಯಾ ಮಳ್ಳಿ
ನೀ ಎನ್ನ ಮನಸ್ಸು ಕದ್ದ ಕಳ್ಳಿ//

ನೀ ಹೋದ ದಾರಿಯಲ್ಲಿ
ನಾ ಹಾಸಿದೆ ಹೊಸ ಹಡದಿ
ಕನಸಿತ್ತು ನೀನಾಗ ಬೇಕು ಮಡದಿ
ಇಂದು ಬರಿ ಕಲ್ಲು ಮುಳ್ಳಿನ ಹಾದಿ//

ಚಂದನದ ಗೊಂಬೆ ಮೈಬಣ್ಣ ಲಿಂಬೆ 
ಮಾತಿಗೆ ಮಾತು ಬೆಳೆದಾಗ ಸೋತೆ
ಮೌನದಲ್ಲಿ ಹೃದಯ ಕದ್ದು ನೀ ಗೆದ್ದೆ
ಮರೆಯಾಗಿ ಮನದಲೇತಕೆ ಖ್ಯಾತೆ//

ಕಣ್ಣು ಮುಂದೆ ಬರಿ ಕಲ್ಲು ಗುಡ್ಡಗಳೆ
ಬಣ್ಣಗಳು ನೂರಾರು ಹಚ್ಚಿಕೊಳ್ಳಲುಂಟೆ
ಸಣ್ಣ ತೊರೆಗಳು ಚಲಿಸಿವೆ ಹಾವಾಗಿ
ಹೂವುಗಳು ಚುಚ್ಚುತ್ತಿವೆ ಮುಳ್ಳಾಗಿ// .

ಕನಸು ಕಾಣಲು ಕಲಿಸಿ 
ಕತ್ತಲೆಯಲ್ಲಿ ಬೆಳಕು ಹರಿಸಿ
ಮನಸು ಮುರಿದು ಹೋದೆ ಹೇಸಿ 
ಮಾಗಿದ ಮೇಲೆ ಹೇಗೆ ಇರಲಿ ಸಹಿಸಿ//

Thursday, November 4, 2021

* ಹಣತೆ ಉರಿಯಲಿ *

* ಹಣತೆ ಉರಿಯಲಿ *

ತಲೆಯ ಭಾರ ಇಳಿಯಲು 
ಎದೆಯ ಭಾರ ಅರಳಲು 
ಹೃದಯ ಗೀತೆ ಹಾಡುವೆ /ಪ/

ಮನದ ಮೈಲಿಗೆ ತೊಳೆಯಲು 
ಮಬ್ಬುಗತ್ತಲು ಹರಿಯಲು 
ಹಬ್ಬದ ಹಣತೆಯು 
ಉರಿಯಲಿ //

ಕಬ್ಬು, ಕದಳಿಯ ದಿಬ್ಬಣ
ಹಬ್ಬದ ಕಳೆ ಹರಡಲು 
ಮಾನವತೆ ಗೀತೆಯು
ಮೆರೆಯಲಿ //

ಮನೆ,ಮನ ಮನಗಳಲ್ಲಿ  
ಮಂದಿರ ಮಸೀದಿ ಅರಿಯಲು
ಪ್ರೀತಿಯ ದೀಪವು 
ಉರಿಯಲಿ //

ಸ್ನೇಹವೆಂಬ ಬತ್ತಿಯ 
ಹೊಸೆದು ತಿದ್ದಿ ತೀಡಿ 
ಹೊಸ ಹಣತೆಯು 
ಬೆಳಗಲಿ  //

ಮನದ ಭಾರ ವಿಳಿಯಲು 
ಹಣದ ಮೋಹ ತುಳಿಯಲು
ಗುಣವು ... ಹೂವು
ಮಾಲೆಯಾಗಲಿ// 

ಬಸನಗೌಡ ಗೌಡರ

Tuesday, November 2, 2021

ಮಗು ಮನುಷ್ಯನ ತಂದೆ

*ಮಗು ಮನುಷ್ಯನ ತಂದೆ *

ಮಾನವನ ವಿಕಾಸ , ಅದು ನಿರಂತರವಾಗಿ ಬಹುಕಾಲದಿಂದ ನಡೆದುಕೊಂಡು ಬರುತ್ತಿದೆ .ಅದು ಪ್ರಕೃತಿಯ ಸಹಜ ಪ್ರಕ್ರಿಯೆಯೂ ಕೂಡಾ ಹೌದು, ಒಂದು ತಲೆಮಾರಿನ ಜನಾಂಗದ ಜನರನ್ನು ಇನ್ನೊಂದು ತಲೆಮಾರಿನ ಜನರಿಗೆ ಹೋಲಿಕೆ ಮಾಡಿ ನೋಡಿ ... ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಅರ್ಥ ವಾಗುತ್ತದೆ ಅವರ ಯೋಚನಾ ಲಹರಿ ,ನಿರ್ಧಾರ ತೆಗೆದುಕೊಳ್ಳವ ಶಕ್ತಿ, ತಾರ್ಕಿಕತೆ, ನಿಖರತೆಯಲ್ಲಿ ಬದಲಾವಣೆಯನ್ನು ಕಾಣಬಹುದು. ನಾನು ಇಲ್ಲಿ ಯವರೆಗೆ ಈ ಪೀಠಿಕೆ ಹಾಕಿದ್ದು ಏಕೆಂದರೆ ನಾನೊಂದು ಅಪರೂಪದ ಘಟನೆಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೇನೆಂದರೆ  ನನ್ನ  ವಿದ್ಯಾರ್ಥಿ ಜೀವನದಲ್ಲಿಯ ಘಟನೆ. ಮೂಲತಃ ನಾನು ಹಳ್ಳಿಯ ಹುಡುಗ ಹೀಗಾಗಿ ದಡ್ಡನೂ ಅಲ್ಲದ ಜಾಣನೂ ಅಲ್ಲದ ಮಧ್ಯಮ ಕೆಟಗೆರಿಗೆ ಸೇರಿದ ವ್ಯಕ್ತಿ . ಹಲವಾರು ಏಳು ಬೀಳುಗಳನ್ನು ಕಂಡು ಬೋಧಕನಾಗುವ  ಹಂತಕ್ಕೆ ಬಂದು ತಲುಪಿದ್ದು. ಆ ಮಾತು ಹಾಗಿರಲಿ, ಹಳ್ಳಿಯ ಬದುಕು ಅಂದರೆ ವ್ಯಾಜ್ಯಗಳು ಕೂಡಾ ಸಾಮಾನ್ಯ ಅದು ಆಸ್ತಿಗೆ ಸಂಬಂಧಿಸಿದ ಸಿವಿಲ್ ತಕರಾರು ,ನಮ್ಮ ಮನೆಗೂ ಅಂಟಿಕೊಂಡಿತ್ತು ಹಾಗಾಗಿ ಅಪ್ಪ ಶಹರಿನಲ್ಲಿ ಒಬ್ಬ ವಕೀಲರನ್ನು ತನ್ನ ವಕಾಲತ್ತು ವಹಿಸಲು ಗೊತ್ತು ಮಾಡಿದ್ದರು.ಆಗ ನಾನು ಡಿಗ್ರಿ ಮಾಡುತ್ತಿದ್ದ ಸಮಯ.ನನಗೆ  ವಕೀಲರ ಮನೆಗೆ ಹೋಗುವ ಸನ್ನಿವೇಶ ಬಂದಿತ್ತು, ಹಾಗಾಗಿ ನನ್ನ ಕ್ಲಾಸ್ ಮುಗಿಸಿ ವಕೀಲರ ಮನೆ ತಲುಪಿದಾಗ  ಗಂಟೆ 2.00 ತೋರಿಸುತ್ತಿತ್ತು.ಅವರ ಬಾಗಿಲಲ್ಲಿ ನಿಂತು ವಕೀಲರ ಬಗ್ಗೆ ವಿಚಾರಿಸಿದಾಗ ಅವರು ಅದಾಗಲೇ ಊಟ ಮಾಡಿ ನಿದ್ರೆಗೆ ಜಾರಿದ್ದರು, ಒಂದು ಗಂಟೆ ಕಾಯಲು ಸೂಚಿಸಿದರು .ಸರಿ ಒಂದು ಗಂಟೆಯ ಅವಧಿಯಲ್ಲಿ ಹೋಗುವದೆಲ್ಲಿಗೆ ? ಹೋಗಲು ಅರ್ಧ ಗಂಟೆ ,ಮರಳಿ ಬರಲು ಅರ್ಧ ಗಂಟೆ ಹಾಗಾದರೆ ಹೋಗುವುದಾದರೂ ಏಕೆ ? ಅಕಸ್ಮಾತ್ ಹೋಗುವ ಮನಸ್ಸಾದರೆ  ಹೋಗಬಹುದೇನೋ,ಹೋದರೆ ಹೋಟೆಲ್ ಕಡೆ ಮುಖ ಮಾಡಬೇಕು ಹೋಟಲ್ ನಲ್ಲಿ ಪ್ರವೇಶ ಮಾಡಿದರೆ ಹಾಗೆ ಮರಳಿಲಿಕ್ಕೆ ಆಗುತ್ತಾ ? ದುಡ್ಡ ಅಂತೂ ಬೇಕೆ ಬೇಕು ,ಆದರೆ ನನ್ನಲ್ಲಿದ್ದ ದುಡ್ಡಾದರೂ ಎಷ್ಟು, ಅದು ಚೂರು ಪಾರು.  ಅದನ್ನು ಅತ್ಯಂತ ಚೌಕಾಸಿಯಲ್ಲಿ  ಬಳಸುವ ವಿದ್ಯಾರ್ಥಿ ನಾನು,ಇನ್ನೊಂದು.... ಬಳಸಿದರೂ ಅದು ಆರೋಗ್ಯವಂತ ಆಹಾರವಾಗಲು ಸಾಧ್ಯವಿಲ್ಲ .ಹೋಟೆಲ್ ಗಳೆಂದರೆ ಅವುಗಳು ನಿರಾಶ್ರಿತರ ಆಶ್ರಯ ಸ್ಥಾನಗಳೆಂದು ಗೆಳೆಯರ ಮುಂದೆ ಜಂಭ ಕೊಚ್ಚಿ ಕೊಂಡವನು ನಾನು,ಹೀಗಾಗಿ ಒಂದು ಗಂಟೆಯ ಅವಧಿ ಅಲ್ಲಿಯೇ ಕಳೆಯುವ ನಿರ್ಧಾರ ಮಾಡಿದೆ.ಸರಿ ,ಸಪ್ಪೆ ಮುಖ ಮಾಡಿ ಕುಳತಾಗ ಬಡ ಭಾರತೀಯ ರೈತನ ಸುಡಗಾಡು ಬಾಳು ಕಣ್ಣು ಮುಂದೆ ಸುಳಿದಾಡ ಹತ್ತಿತು. "ವಡ್ಡ ಮಾಡಿದ ಹೆಂಡಕೆ ರೈತ ಮಾಡಿದ ದಂಡಕೆ ಹಾರವ ಮಾಡಿದ ಪಿಂಡಕೆ" ನಮ್ಮ ಅಪ್ಪನ ಮಾತು ನನ್ನ ತಲೆಯಲ್ಲಿ ಗಿರಕಿ ಹೊಡಿಯ ಹತ್ತಿತು ಅದು ಕಾಕತಾಳೀಯವೋ ಏನು ನಾನು ಯಾರಿಗಾಗಿ ಕಾಯಲು ನಿಂತಿದ್ದೇನೋ ಆ ವಕೀಲರೂ ಕೂಡಾ ಬ್ರಾಹ್ಮಣರೆ ಆಗಿದ್ದರು .ಅದು ಅವರ ತಪ್ಪಲ್ಲ ಅದು ಬುದ್ಧಿ ಸಮರ್ಪಕವಾಗಿ ಬಳಸದ ರೈತನದಾಗಿದ್ದರೆ ಅದಕ್ಕೆ ಯಾರು ಹೊಣೆಗಾರುರು ? ಅದು ಉತ್ತರ ಸಿಗದ ಪ್ರಶ್ನೆ. ನನ್ನ ಲೇಖನದ ಉದ್ದೇಶ ಅದಲ್ಲ ,ಬದಲಾಗಿ ಆ ಅವಧಿಯಲ್ಲಿ ನಡೆದ ಒಂದು ಸನ್ನಿವೇಶ ಈಗ ಬರೆಯಲು  ಹೊರಟಿರುವುದು ಆ ವಕೀಲರ ಮನೆಯಲ್ಲಿ ಒಂದು ಅಥವಾ ಎರಡನೇಯ ವರ್ಗದ ವಿದ್ಯಾರ್ಥಿ ಇರಬಹುದುನೋ ಕಾರಿಡಾರ್ ನಲ್ಲಿ ಚಿತ್ರ ಬಿಡಿಸುತ್ತ ಕುಳಿತುಕೊಂಡಿತ್ತು ಬಹು ಚೂಟಿಯಾದ ಹುಡುಗ,ಮುದ್ದು, ಮುದ್ದಾಗಿದ್ದ ,ನೋಡಿದರೆ ಮಾತಾಡಿಸಬೇಕು ಎಂಬ ಹಂಬಲ ಉಂಟಾಗುವಂತಿದ್ದ. ಆತ ಇಂಗ್ಲಿಷ್ ಮೀಡಿಯಂ ದಲ್ಲಿ ಓದುತ್ತಿದ್ದ ಹುಡುಗ ಎಂದು ತಿಳಿಯಲು ಬಹಳ ಟೈಮ್ ತೆಗೆದು ಕೊಳ್ಳಲಿಲ್ಲ ,ಏಕೆಂದರೆ ವಕೀಲರ ಮಗನಲ್ವಾ. ಇರಲಿ, ಚಿತ್ರ ಬಿಡಿಸಿ ಅದಕ್ಕೆ ಬಣ್ಣ ಹಚ್ಚುವ ಕಾರ್ಯ ದಲ್ಲಿ ಆತ ಮಗ್ನನಾಗಿದ್ದ. ಆತನ ಏಕಾಗ್ರತೆಗೆ ನಾನು ತಲೆದೂಗಿದೆ.ಜಗತ್ತಿನ ಪರಿವೆಯೂ ಇಲ್ಲದೆ ಅದರಲ್ಲಿ  ಮಗ್ನನಾಗಿದ್ದ. ಅದಕ್ಕಾಗಿಯೇ ಆತ ಜಾಣನಾಗಿದ್ದಿರಬಹುದು "The difference between man and man is the power of concentration " ಎಂದು ಸ್ವಾಮಿ ವಿವೇಕಾನಂದರು ಇದಕ್ಕೆ ಹೇಳಿದ್ದಿರಬಹುದು. ನಾನು ಆತನನ್ನು ಪ್ರಶ್ನೆ ಮಾಡಿದೆ ಮಗು ಚಿತ್ರ ಬಿಡಿಸುತ್ತಿದ್ದೀಯಾ? ಮಗು ತಲೆ ಅಲ್ಲಾಡಿಸಿತು, ಹೌದೆಂಬತೆ. ನನಗೂ ವೇಳೆ ಕಳೆಯಬೇಕಾಗಿತ್ತು. ಮಕ್ಕಳ ಜೋತೆ ಕಾಲ ಕಳೆಯುವದೆಂದರೆ...ಅದು ಸ್ವರ್ಗದ ಅನುಭವ, ಅದು  ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ನಾನಂತೂ ಸ್ವರ್ಗದ ಅನುಭವ ಕಂಡಿದ್ದೇನೆ. ಇರಲಿ ನನಗೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಬೇಕೆನಿಸಿತು .ಕೇಳುವುದೇನು ? ಚಿತ್ರ ಬಿಡಿಸುವಾಗ ಸರಾಗವಾಗಿ ಚಲಿಸುವ  ಆತನ ಬೆರಳುಗಳನ್ನು ನೋಡಿ,ಅದರ ಬಗ್ಗೆ ಪ್ರಶ್ನೆ ಮಾಡೋಣ ಎಂದು "How many fingers have you? ಎಂದೆ. ತಕ್ಷಣವೇ ಹುಡುಗ " I have ten fingers in my two hand " ಎಂದ. ನಾನು ಕ್ಷಣ ವಿಚಲಿತನಾದೆ, ಏಕೆಂದರೆ ಆತನ ಖಚಿತ ಉತ್ತರದಿಂದ... ! ಬೆರಳುಗಳೆಂದಾಗ 20 ಹೇಳಬಹುದಿತ್ತಲ್ಲವೆ ...! ತನ್ನ ಉತ್ತರದಿಂದ ನನ್ನ ಪದವಿ ಕಲಿಕೆಯ ಬೇರುಗಳನ್ನು ಬುಡಮೇಲು ಮಾಡಿ,ಮಗು ಮನುಷ್ಯನ ತಂದೆ ಯಾಗಿದ್ದ. ಮುಂದುವರಿದು ಪರಿಪೂರ್ಣತೆಗೆ ಮತ್ತೆ ಮತ್ತೆ ಪ್ರಯತ್ನ ಮಾಡಲು ಪ್ರೇರಣೆಯಾಗಿದ್ದ .ಹಾಗಾಗಿ ಇಂದೂ ನಾನು ಪ್ರಯತ್ನಿಸುತ್ತಲೆ ಇದ್ದೇನೆ.ಇರಲಿ   ಇವತ್ತು ಅನೇಕ ವಿದ್ಯಾರ್ಥಿಗಳು ಶಿಕ್ಷಕರಾಗಲು ತರಬೇತಿ ಮಹಾವಿದ್ಯಾಲಯದ ಕಡೆ ಮುಖ ಮಾಡುತ್ತಿದ್ದಾರೆ, ಸಂತೋಷದ ವಿಷಯವೂ ಕೂಡಾ ಹೌದು. ಆದರೆ ಪ್ರಶ್ನೆ ಮಾಡುವ ಕೌಶಲ್ಯದಲ್ಲಿ ಎಡವಿದ್ದನ್ನು ನಾನು ನೋಡಿದ್ದೇನೆ. ಅದರ ಕುರಿತು ವಿಷಯ  ಹಂಚಿಕೊಳ್ಳುವ ಅವಕಾಶವನ್ನು ಗುರುಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯ ನನಗೆ ನೀಡಿತ್ತು .ಅದು ಹೇಗೆಂದರೆ ರಾಜ್ಯೋತ್ಸವದ ದಿನಾಚರಣೆ ಅತಿಥಿಯಾಗಿ ಮಾತನಾಡುವ ಸಂದರ್ಭ ವದು....ರಾಜ್ಯೋತ್ಸವ ಕುರಿತು   ಮಾತನಾಡುವಾಗ.... ಈ ವಿಚಾರ ಅಪ್ರಸ್ತುತ ಎಂದು  ಅನಿಸುವದಿಲ್ಲವೆ  ? ಅನಿಸಬಹುದು, ನಾನು ರಾಜ್ಯೋತ್ಸವದ ಕುರಿತು ಮಾತನಾಡಿದ ಮೇಲೆಯೇ ಅನುಮತಿ ಪಡೆದು ನನ್ನ ಅನುಭವ ಹಂಚಿಕೊಂಡದ್ದು ಪ್ರಶಿಕ್ಷಣಾರ್ಥಿಗಳು ಎಂದರೆ ರಾಜ್ಯದ ಉದ್ದಗಲಕ್ಕೆ ಜ್ಞಾನವನ್ನು ಬಿತ್ತರಿಸಲು ಹೋಗುವವರು ಅವರಿಗೆ  ಪ್ರಶ್ನೆಗಳ ಮಹತ್ವ ಇರಲಿ ಎಂದು ಹೇಳಿದೆ ಅಷ್ಟೇ.  ಇದರ ಕುರಿತಾದ ಒಂದು ಲೇಖನ ಮಾಡಿದರೆ ಹೇಗೆ ಎಂದು ತಲೆಯಲ್ಲಿ ಸುಳಿದಾಡಿದ್ದೆ ತಡ ನನ್ನ ಬೆರಳು ಮೊಬೈಲ್ ಮೇಲೆ ಓಡಾಡಲು ಪ್ರಾರಂಭ  ಮಾಡಿದ್ದು. ತಮ್ಮ ಅಮೂಲ್ಯ ವೇಳೆ ಕತ್ತರಿ ಹಾಕಿದ್ದಕ್ಕೆ ಕ್ಷಮಿಸಿ.  ಶುಭರಾತ್ರಿ.

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...