Monday, March 1, 2021

"ಕಣ್ಣು ಮುಚ್ಚಿದ ಸತ್ಯ "

ಎತ್ತ ನೋಡಿದತ್ತತ್ತ ಮರಿ 
ಸೂರ್ಯರೆ ಮನೆ ಹಿಂದೆ ಮುಂದೆ 
ಮರಗಳೆ ಮಾಯ, 
ಗೆರೆ ಬೇರುಗಳೆ ಕುರುಹುಗಳು, 
ಮಾನವ ಹಿರಿಮೆ  ಗರಿಮೆಗಳೆ 
ನಮ್ಮ ಸ್ಮಾರಕಗಳು .
ಅಭಿವೃದ್ಧಿಯ  ಪಿತ್ತ ಮೈವೆತ್ತಿ 
ರೈತನ ಭೂಮಿಯ ಕತ್ತು 
ಕೊಯ್ದದ್ದೆ ಸಾಧನೆ 
ಸುತ್ತಿದ ಶಹರಗಳು ಗ್ರಹಗಳಂತೆ 
ಗ್ರಾಮಗಳ ಆಕ್ರಮಣ.
ಟಾರು ಸಿಮೆಂಟ ರಸ್ತೆಗಳು
ಕುಡಿಯ ಬಿಡಲೊಲ್ಲರು ಬಾಯಿ ಒತ್ತಿ
ಒಡಲು ಸೇರದ ನೀರು ....
ನದಿಯೆ ಬುಡಮೇಲು. 
ಪ್ರವಾಹ ಪ್ರಲಾಪ,
ಸಂದಿ ಗೊಂದಿಗಳಲ್ಲಿ 
ವಿಚಾರ ಸಂಕೀರ್ಣ.
ಉದ್ದುದ್ದು ಭಾಷಣ ಮಾಡಿದವರೆ 
ಪಂಡಿತರು....! ಚಪ್ಪಾಳೆ ಸದ್ದಿನಲ್ಲಿ ಕೇಳುವರಾರು ?
ಕೃಷಿಕನೆಂದವನ ಆಕ್ರಂದಣ, 
ಕೈಮೀರಿದ ಕಲಿಗಳಿಗದು 
ಇದ್ದೆ ಇದೆ, ಯೋಚನೆ ಯೋಜನೆ 
ಆಯೋಗಗಳ ಸರಮಾಲೆ.
ಎತ್ತಿ ಹೇಳಿದವನೆ ಭೃತ್ಯ
ಗತ್ತಿನಿಂದ ಮಾಡಿಸುವರು ನೃತ್ಯ 
ಸುತ್ತ ಗಿರಕಿ ಹೊಡೆಯುತಿದೆ
ಕಣ್ಣು ಮುಚ್ಚಿದ  ಸತ್ಯ. 

 ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...