Wednesday, February 22, 2023

* ಅಳಿದಿಲ್ಲ... ಬೆಳೆವೆ *

ಒಂದೊಮ್ಮೆ ಮುಗಿಲೆತ್ತರಕೆ 
ನಳಿನಳಿಸಿ ನಾ ಮತ್ತಿನ ಬೆಳೆ. 
ಸಿಹಿ ತುಂಬಿದ ರಸಭರಿತ  
ಸಡಗರದ  ವಯ್ಯಾರದ ಬಾಲೆ.
ಮೈತುಂಬಾ ಬಾಲ ...
ಬಾಗಿಲಿಗೆ ಆಗಿದ್ದೆ ದೀಪಾವಳಿಯ ತೋರಣ.
ಮಗದೊಮ್ಮೆ ಸಂತೆ ಮುಗಿಸಿದ 
ಸಂತನ ಯಾತ್ರೆಯ ಅಂತಿಮ ಆಭರಣ .
ಶಕೆಯಾದರೆ ಬೀಸುವ ಚಾಮರ 
ಇಲ್ಲ ಬಡಿವಾರ ! ತವರ ಪ್ರೀತಿಗೇನು ಬರ ?
ಬಂತೊಮ್ಮೆ ಬಹು ದೂರದಾ 
ರಕ್ಕಸನ ಸಂಹಾರ  
ಬೇಕಂತೆ ಅವರಿಗೆ ಕತ್ತರಿಸಿ 
ಸಿಹಿ ಮುಕ್ಕುವ ಅವಸರ. 
ಮುತ್ತಿಟ್ಟ ಆ ದಿನ ಹೆತ್ತವರ ಪ್ರೀತಿ .
ಸುತ್ತ ತಿರುಗಿ ಮತ್ತು ಏರಿತೈ ಮುಗಿಲೆತ್ತರ 
ಎತ್ತಲೋ ಬಂತು ತಂಡ 
ಕತ್ತರಿಸಿ ಎತ್ತಿ ಮೇಲಿಟ್ಟು 
ಸುತ್ತಿ ಕಳಿಸಿದರು ಬಹು ದೂರ 
ಹಿಚುಕಿ ಹಿಂಡಿ,ಹೊಸಕಿದರು....
ನಾನಾದೆ ಸಿಪ್ಪೆಯ ತುಂಡು.
ಅವಡುಗಚ್ಚಿ ಬಿಗಿಹಿಡಿದೆ ತುಸು 
ತವರಿನ ಕಿಸುನಗೆಯ ಪ್ರೀತಿಗೆ ಒಪ್ಪಿ.
ಮರೆಯುವದು ಹೇಗೆ ?  ಮೈದಡವಿದಾ ಪ್ರೀತಿ.
ಕಾಲು ಕಿತ್ತಿಲ್ಲ ನೆಲೆ ಇದೆ,ಮತ್ತೆ ಮೇಲೇಳುವಾಸೆ 
ಮೈದಡುವವರ ಮಮತೆ ಹಿಡಿವಾಸೆ 
ಮೇಲೆದ್ದು ನಲಿವಾಸೆ ತಲೆಬಾಗಿ 
ಅಳಿದುಳಿದ ಕಬ್ಬು ಕುಳೆ ನಾ ಬೆಳೆದು 
ಸಿಹಿಯಾಗುವೆ ಸಹಿಸಿ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...