Friday, April 5, 2024

" ಅಂಕದ ಪರದೆ ಜಾರುವ ಮುನ್ನ"

" ಅಂಕದ ಪರದೆ ಜಾರುವ ಮುನ್ನ"


ಅಂಕದ ಪರದೆ ಜಾರುವ ಮುನ್ನ
ಮನಸ್ಸು ಅರಳಿದ ಭಾವ, ।
ದೇಹ ಬಾಡಿದ ಜೀವ.ಸಂಬಂಧಗಳು 
ಮಾತ್ರ ಸಂಶಯದ ಗೂಡಿನಲ್ಲಿ ॥

ಕಟ್ಟುವದು ಹೇಗೆ ? ಉಸುಗಿನ ನೆಲದಲ್ಲಿ
ಪ್ರೀತಿ ತುಂಬಿದ ಸುಂದರ ಮಹಲು ।
ಆಗಾಗ ಏಳುವ ಭೂಕಂಪ ಸುನಾಮಿ
ನಡುಗಿಸುವುದು ನಾಟಕದಂಕದ ಪರದೆ .॥

ನೀಡಿದ ಪಾತ್ರಕೆ ಜೀವ ತುಂಬುವ ತವಕ
ನಾಂದಿ ಹಾಡುವ ಮುನ್ನ ನಂಬಿಕೆಗೆ ಗ್ರಹಣ।
ಗಿರಗಿರನೆ ತಿರುಗುವ ಕಾಲಚಕ್ರದ ಗಾಲಿ 
ಒಮ್ಮೆ ಏರಿಯ ಮೇಲೆ ಇನ್ನೂಮ್ಮೆ ಕಮರಿಯ ಮೇಲೆ॥

ಮತ್ತೆ ಕಾತರಿಸುವವು ಹಳೆಯ ಹಳ್ಳಿಯ 
ಬದುಕಿನ ನಿಷ್ಕಲ್ಮಷ ಹಸನಾದ ಕಥೆಗಳು।
ಅವು ನಮ್ಮ  ಕನಸುಗಳು,ನನಸುಗಳು
ಬೆಳ್ಳಿಯ ಪರದೆಯ ಬಣ್ಣ ಬಣ್ಣದ ಚಿತ್ರಗಳು
ಹಣ ನೀಡದೆ ನೋಡುವ ಸಿನಿಮಾಗಳು॥

ಗೆಳೆಯರ ಗುಂಪಿತ್ತು ವಿಶ್ವಾಸದ ತಂಪಿತ್ತು 
ಬಣ್ಣ,ಜಾತಿಗಳಂತಸ್ತು  ಮೂಲೆಗೆ ಸೇರಿತ್ತು। .
ಸಮಾನತೆಯು ಎಲ್ಲೆಲ್ಲೂ ಮನೆ ಮಾಡಿತ್ತು.
ಈಗ ಎಲ್ಲರ ಚಿತ್ತ ಮಾಡಬೇಕು ಸಂಪತ್ತು॥

ಹಣವಿರಲಿಲ್ಲ ಹೆಣಗಾಟವಿತ್ತು,ಮನ 
ಕದಲಿದರೆ,ಮಾರುದ್ದದ ಪ್ರೀತಿ ಸಿಗುತ್ತಿತ್ತು । 
ಹೊಣೆ ಹೊರಲು ಕಾಯ್ದಿತ್ತು ಜಗತ್ತು 
ಎಲ್ಲಿದೆ ಋಣ ಜಾರುವುದೆ ಅಸಲಿಯತ್ತು ॥

ಅಂದು ಹಸಿವಿತ್ತು, ಕಿಸೆಯಲ್ಲಿ ಕಾಸಿಲ್ಲ
ಇಂದು ಇದೆ, ಎಲ್ಲಾ. ಕರಗಿಸಲು ಕಸುವಿಲ್ಲ।
ಮಾತಿನಲ್ಲೆ ಕೈಲಾಸ ,ಬೀಸುವುದು ಬರಿಕಲ್ಲು
ಹಿಟ್ಟಿಗೆ ಬರ ಹೊಟ್ಟೆಗೆಲ್ಲಿದೆ ಬಿಸಿ ರೊಟ್ಟಿ॥
 
ಹಿತವಾಗಿ ಬದುಕಲು ಜೊತೆಯಾಗಿ
ನಡೆಯಬೇಕು, ಕಥೆ ಹೇಳಲಿಲ್ಲ ಪುರಸೊತ್ತು ,
ಚೌಕಸಿ ಮಾಡಿದರೆ ಕಾದಿದೆ ಆಪತ್ತು .
ತಡಮಾಡದೆ ಹಾಡಬೇಕು ನಾಂದಿ ಇವತ್ತು.॥


No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...