Tuesday, August 30, 2022

* ತಲುಪಿದ್ದು ದ್ವೀಪ ಅಲ್ಲಿಲ್ಲ ದೀಪ *

ಬದುಕೊಂದು ಬವಣೆಯ ದೋಣಿ 
ಇದಕಿಲ್ಲ ಕೊನೆ, ಹಾಕಿಹರು ಮಣೆ 
ಮಧು..ವಿಗೊ,ಮದಿರೆಗೊ ವಧುವಿನ
ಮದುವೆಗೆ ನಡೆದಿದೆ ಸಡಗರದ ಪಯಣ !!

ಚದುರಿದಾ ಮೋಡಗಳಂಬರದ 
ಮಡಿಲಲ್ಲಿ ಚಿತ್ತಾರದ ಚಂದ್ರಮ
ಹಾಲಿನಂತಹ ನೊರೆ ಬೆಳದಿಂಗಳ 
ನೋಡಲೆರಡು ಸೋತಿವೆ ನಯನ!!

ಬಾಚಿ ತಬ್ಬಲು ಹೀಚು ಕಾಯಿಗಳು
ಕಚುಗಳಿಯಿಡುವ ಕನ್ಯೆಯರಿವರು
ಶಶಿಧರನಂಗಳದ ಈ ಚಿಕ್ಕಿಗಳಾ ಹಿಂಡು
ನಶೆಯೇರಿಸಿ ನೀಡಿದವು ಹೊಸ ಚುಂಬನ !!

ಶರಧಿಯ ಸಮ್ಮೋಹನಕರಳಿದ ರವಿ
ವರದಿಯ ನೀಡಲು ಬಂತು ಹೊಂಬಣ್ಣ  
ಉಷೆಯಲ್ಲರಳಿದ ನಸು ಗೆಂಪಿನ 
ಹಸಿಹಸಿ ಕನಸುಗಳಾ.. ಆಲಿಂಗನ !!
 
ದಡ ತಲುಪಿ ಕುಣಿಯಿತು ಮನ 
ಹೆಡೆಯೆತ್ತಿದೆ ಉರಗ ಗುಣ 
ತಲುಪಿದ್ದು ದ್ವೀಪ ಅಲ್ಲಿಲ್ಲ ದೀಪ 
ಮಲೆತು ಕತ್ತಲೆಯೊಂದಾಗಿದೆ ಶಾಪ !!

🖋  ಬಸನಗೌಡ ಗೌಡರ

Sunday, August 28, 2022

ಸಾಮರಸ್ಯಕ್ಕೊಂದು ಅನುಭವ ಮಂಟಪ




ಸಮಾಜದಲ್ಲಿ ಸಾಮರಸ್ಯಕ್ಕೊಂದು ಅನುಭವ ಮಂಟಪ*

ಕಲ್ಯಾಣವೆಂಬುದು ಎಲ್ಲಿಹುದಯ್ಯಾ ? ಕಲ್ಲು ಹೃದಯಗಳಲ್ಲಿ ಅಲ್ಲ, ಮಲ್ಲಿಗೆಯಂತ ಮನಗಳಲ್ಲಿ ಬೆಣ್ಣೆಯಂತ ಹೃದಯಗಳಲ್ಲಿದೆ . ಅದು ನಡೆದದ್ದು ದಿನಾಂಕ 28.08.2022 ರಂದು. ಅಂತಹ ಅನುಭವ ಮಂಟಪದ ಶರಣನಾಗುವ ಸೌಭಾಗ್ಯವೊಂದು ನನಗೆ ಬಂದದ್ದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆ ಸರಿ. ಶ್ರೀ ಗುರುಸಿದ್ದೇಶ್ವರ ಬ್ರಹನ್ಮಠದ 1008  ಶ್ರೀ ಬಸವರಾಜ ಪಟ್ಟಾದಾರ್ಯ  ಶ್ರೀಗಳ ಕನಸಿನ ಕೂಸು ಶ್ರಾವಣ ಮಾಸದ ಪ್ರವಚಗಳ ನಿರ್ವಹನೆಯ ಅಧ್ಯಕ್ಷ ಹಾಗೂ ಸ್ನೇಹಿತ ಶ್ರೀ ಚಂದ್ರಶೇಖರ ಹೆಗಡೆ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬೀಳಗಿ ,ಇವರ ಮುಂದಾಳತ್ವದಲ್ಲಿ ಲೋಕಾರ್ಪಣ ಗೊಂಡದ್ದು ಈಗ ಐತಿಹಾಸಿಕ ಸತ್ಯ. ಶ್ರಾವಣ ಮಾಸದಲ್ಲಿ ಸತ್ಕಾರ್ಯಗಳು, ಸತ್ ಚಿಂತಣೆಗಳು ನಡೆದು. ಸಾದು ಸಂತರ ಮಾತುಗಳನ್ನು ಕೇಳಿ ಪುಣಿತರಾಗುವದು ಸರ್ವೆ ಸಾಮಾನ್ಯ ಆದರೆ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಹೊಸ ಪ್ರಯೋಗವೊಂದು  ಶ್ರೀಮಠದಲ್ಲಿ ನಡೆಯಿತು, ಅದೇನಂದರೆ ಶ್ರೀ ಗುರು ಬಸವದೇವರ ಪ್ರತಿ ದಿನದ ಪ್ರವಚನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನುಭಾವಿಗಳ ಲಘು ಉಪನ್ಯಾಸ. ಶ್ರಾವಣ ಮಾಸದ ಮೂವತ್ತು ದಿನಗಳೂ ನಿರಂತರವಾಗಿ ನಡೆದು ಆಗಷ್ಟ 28 ರಂದು ಸಂಪನ್ನಗೊಂಡಿತು.ಅದು ನಿಜವಾಗಿಯೂ ಅನುಭವ ಮಂಟಪವೆ ಸರಿ.ನನಗೆ ವಿದ್ಯಾದಾನಮಾಡಿದ ನಾಲ್ಕು ಜನ ವಿದ್ಯುನ್ಮಣಿಗಳಾದ ಡಾ!ವ್ಹಿ ಎ ಬೆನಕನಾಳ,ಎಸ್ ಎಸ್ ರಾಜನಾಳ,ಸಿದ್ಧಲಿಂಗಪ್ಪ ಬರಗುಂಡಿ ಹಾಗೂ ಎಮ್ ಎಮ್ ಜಗತಾಪ ರ ಆದಿ ಯಾಗಿ 30 ದಿಗ್ಗಜರ ನಡುವೆ ನಾನೊಂದು ಬಡಪಾಯಿ ಶರಣ, ಹೂವಿನ ಜೊತೆ ದಾರವು ದೇವರ ಮುಡಿಗೇರದ ಹಾಗೆ ಅವರ ಮಧ್ಯೆ ನನಗೂ ಒಂದು ಸನ್ಮಾನ, ಧನ್ಯನಾದೆ ಭಗವಂತ.ಅದಕ್ಕಿಂತ ಇನ್ನೂಂದು ಮಹತ್ವದ ವಿಷಯ ಏನೆಂದರೆ, ಸಮಾಜ ಸಮಾಜಗಳ ನಡುವೆ ತಮ್ಮ ಸಮಾಜ ಮತ್ತು ಸಂಸ್ಕೃತಿಗಳ ವೈಭವೀಕರಣದ ಪೈಪೋಟಿಯ ಇಂದಿನ ದಿನಾಮಾನದಲ್ಲಿ ಸರ್ವ ಸಮಾಜದ ಒಳಿತು ಬಯಸುವ ಬಸವ ಚಿಂತನೆಗಳ ಸಾಕ್ಷಾತ್ಕಾರದ ಸಮಾರಂಭ. ಸಮಾಜಗಳು ಕಲುಷಿತವಾಗುತ್ತಿರುವ ಸೂಚನೆಗಳು ಕಾಣುತ್ತಿರುವ ಈ ಪರ್ವ ಕಾಲದಲ್ಲಿ ಸರ್ವ ಮಠಮಂದಿರಗಳು ಮಸೀದಿ ಚರ್ಚಗಳೂ ಅನುಸರಿಸಬಹುದಾದ ಸಾಮರಸ್ಯಕ್ಕೊಂದು ಸಣ್ಣ ಪ್ರಯೋಗ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳ ಮನದಲ್ಲಿ ಅಂಕುರಿಸಿದ್ದು ಭಾವೈಕ್ಯತೆಯ ನಾಡಿಗೊಂದು ಭರವಸೆಯ ಆಶಾಕಿರಣ.  ಶ್ರೀಗಳೆ ಹೇಳುವ ಹಾಗೆ ಶ್ರೀ ರಾಮಚಂದ್ರ ಸೇತುವೆ ಕಟ್ಟುವಾಗ ಅಳಿಲೊಂದು ಮಾಡಿದ ಸೇವೆ ! ಸಮುದ್ರಲ್ಲಿ ಮುಳುಗಿ ಹಸಿ ಮೈಯಲ್ಲಿ ಉಸುಗು ಮೆತ್ತಿಸಿ ಸೇತುವೆಗೆ ಆಸರೆಯಾದ ಬಗೆಯಂತೆ. ಚಿಟಕೆ ಉಸುಕಾದರೂ ಏನು ? ತಾವು ಮಾಡುವ ಸೇವೆ  ಸಾಮರಸ್ಯ ಬೆಸೆಯುವ ಸೇತುವೇ ಆದೀತೆಂದು ಒಂದೆ ವೇದಿಕೆಯಲ್ಲಿ  ಮೂವತ್ತು ದಿನಗಳ ಉಪನ್ಯಾಸ ಮಾಡಿದ ಅನುಭಾವಿಗಳನ್ನು ಸೇರಸಿ,ಅಂತಹ ವಿದ್ವತ್ ಮಣಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರದ ಜೊತೆಗೆ, ಹೂ ದಳಗಳನ್ನು ಮಸ್ತಕದ ಮೇಲೆರಿಸಿ ಉಪನ್ಯಾಸದ ಜೊತೆಗೆ ಆಚರಣೆಯ ದೀಕ್ಷೆ ನೀಡಿದ ಕಾರ್ಯ ಮಾನವತ್ವವನ್ನೆ ಮೈಗೂಡಿಸಿಕೊಂಡು ವೈಚಾರಿಕ ನೆಲೆಗಟ್ಟಿನಿಂದ ಸಮಾಜವನ್ನು  ಮುನ್ನಡೆಸುತ್ತಿರವ ಬಸವರಾಜ ಶ್ರೀಗಳಗೆ ಬರದೆ ಇನ್ನಾರಿಗೆ ಬರಲು ಸಾಧ್ಯ ಹೇಳಿ ? ಇವತ್ತಿನ ಕಾರ್ಯ ಗುಳೇದಗುಡ್ಡದ ಸಾಂಸ್ಕೃತಿಕ ಜಗತ್ತಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಉಪನ್ಯಾಸ ಮಾಡಿದ್ದಕ್ಕೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿದ ಶ್ರೀ ಮಠಕ್ಕೆ ಹಾಗೂ ಶ್ರಾವಣ ಮಾಸದ ಪ್ರವಚನ ಉಸ್ತುವಾರಿ ಅಧ್ಯಕ್ಷರಾದ ಚಂದ್ರಶೇಖರ ಹೆಗಡೆಯವರಿಗೆ ಹಾಗೂ ಮಠದ ಎಲ್ಲಾ ಸದ್ಬಕ್ತರಿಗೆ ಹೃದಯಪೂರ್ವಕ ಧನ್ಯವಾದಗಳು.

Saturday, August 27, 2022

ಕಣ್ಣು ತೆರೆಯಿಸಿದೊಂದು ಸಣ್ಣ ಚಿತ್ರ

ಕಣ್ಣು ತೆರೆಯಿಸಿತೊಂದು
ಸಣ್ಣ ಚಿತ್ರ ,ಸಣ್ಣವರಾದರೆ ಏನು ?
ಇನ್ನೂ ಕಲಿಯಬೇಕಿದೆ ನಾನು, 
ನನ್ನವರು.ಬೆನ್ನು ಮೇಲೆ 
ಪದವಿಯ ಮೂಟೆ ಹೊತ್ತವರು.
ಹೊನ್ನು ಹೊದ್ದವರು, ಎದ್ದವರು, ಗೆದ್ದವರು
ಕಣ್ಣು ಕಂಡರೂ ಹೃದಯಕ್ಕೆ ಬಗ್ಗದವರು.
ಕಲಿಯಬೇಕಾಗಿದೆ ಇನ್ನೂ !
ಆದರೂ ನಿಮಗೆ ಕಲಿಸುವ 
ಹಿರಿಯರು, ಗುರುಗಳು ನಾವು
ನೀವು ಕಲಿಯುವುದಕ್ಕಿಂತ 
ನಾವು ಕಲಿಯುವುದೆ ಇನ್ನೂ ಇದೆ !
ಹೊಟ್ಟೆ ಹೊರೆಯಲು ಪಡುವ 
ಕಷ್ಟ ಜೀವಿಗಳೆ ನಿಜ ದೇವರು 
ಪಕ್ಕದಲ್ಲಿ ಪವಡಿಸಿದರು ದಿಟ್ಟಿಸಿ 
ನೋಡಿ ಸರಸರನೆ ಏರುವ
ಕಾಣದೆ ಇರುವ ಕಲ್ಲು ದೇವರಿಗೆ ಬರುವ 
ನನ್ನವರು ಕಲಿಯಬೇಕಾಗಿದೆ 
ಆ ಕಂದಮ್ಮಗಳ ಶಾಲೆಯಲ್ಲಿ 
ಈ ನಿರಮ್ಮಳ ಭಾವದಲ್ಲಿ !

* ನಾಕವೊಂದರಳಲು ಬೇಕು *

ನಾಕವೊಂದರಳಿಸಲು ಬೇಕು 
ನಮಗೊಂದು ಸ್ವಂತ ಕರ್ಮ 
ನಮಗ್ಯಾಕೆ ನರಕದ  ಚಿಂತೆ 
ನಮ್ಮ ಶಿವ ನೀಡಿರುವನು 
ಸಂಸಾರವೆಂಬ ಸಂತೆ !!

ಸಂತೆಯ ಬಯಲಲ್ಲಿ ಸಾವಿರ 
ಕಂತೆ, ಕಂತೆ ! ಸವಿಯಾದ ಫಲ
ತಿಳಿಯದೆ ನಾ.. ಹೌಹಾರಿ ಕುಂತೆ
ಆಯ್ಕೆ ಹೇಗೆ ? ಗರಬಡಿದು ನಿಂತೆ 
ಹೇಳಿದರು... !  ಜ್ಞಾನ ಬೇಕಂತೆ !!

ಕಳೆತ ಹಣ್ಣೂ ಸಾವಿರ ಸಾವಿರ
ಕೊಳೆತ ಹಣ್ಣಿಗೇನಿಹುದು ಕೊರತೆ   
ಮಳೆಯಾಗದೆ ಬೆಳೆದು ನಿಂತಿವೆ
ಬರದ ಬಯಲಿನ ಪಾಪಾಸ ಕಳ್ಳಿ
ಕೌರವ ದೃತರಾಷ್ಟ್ರರಂತೆ !!

ಬರಿ ಸೆಳತೆವೊಂದೆ ಸಾಕೆ  
ಉರಿವ ದೀಪಗಳಂತೆ ಕ್ಷಣಿಕ
ಮರದ  ಫಲಿತ ಹಣ್ಣು ಬೇಕು
ತಡವರಿಸಿ ಹುಡುಕಾಡಿದೆ
ದಾರಿ ಕಾಣದೆ ನಾ ನಿಂತೆ !!

ಕಾಯುವೆ ಕಲಿಗಾಲದ ಕರ್ತಾರನ  
ಕಮ್ಮಟದ ಚಮ್ಮಟಿಯ ಏಟಿಗೆ.
ಹಮ್ಮು ಹರಿದು ಬಿಮ್ಮು ಕಳೆದು
ನಿಮ್ಮದಾಗುವ ಹಿರಿದು ಬಯಕೆಗೆ.
ಸಮ್ಮಾನವುಂಟು ನಾ.... ಅಳಿದ ಮೇಲೆ !!

🖋  ಬಸನಗೌಡ ಗೌಡರ

Sunday, August 21, 2022

* ಗೂಡೊಂದು ಕಟ್ಟುತಿರುವೆ *

ನಾಮಗಳನ್ನು ಕಡಿಮೆ ಮಾಡಿ
ಹೋಮಗಳನು ಹೂತು ಹಾಕಿ
ರಾಗ ದ್ವೇಷ ಮೀರಿದ ಮಡಿವಂತ
ತಾಯಿ ಮಡಿಲಂತ ಗೂಡೊಂದು 
ನಮಗಾಗಿ ಕಟ್ಟುತಿರುವೆ !!

ಕಲ್ಲುಗಾರೆಗಳಿಂದಲ್ಲ
ಹೊಳೆಯುವ ಬಣ್ಣಗಳಿಂದಲ್ಲ
ಬೆಳಗುವ ದೀಪಗಳಿಂದಲ್ಲ 
ಬೆಳಗಿನೊಲವಿನ ಕಳೆಯಿಂದ 
ಪಳಗಿ ಮನೆಯೊಂದು ಕಟ್ಟುತಿರುವೆ!!

ಅರೆ ಹೊಟ್ಟೆ ಹೊರೆದು ಹರಿದಂಬರ ಹೊದ್ದು 
ವರವ ಪಡೆಯಲು ಹೊರಗೆಲ್ಲೂ ಕಾಣದ 
ಧರೆಯಲ್ಲಾ ಬೆಳಗುವಾ ಹರಿ ನಾಮದ.    
ಅರಮನೆಯೊಂದು ಕಟ್ಟುತೀರುವೆ !!
 
ಗುಡಿ ಗೋಪುರದ ಗಡಿ ಮೀರಿ
ಹಿಡಿ ಪ್ರೀತಿ ಮಡಿಲಲ್ಲಿ ಕಾಪಿಟ್ಟು
ಗುಡಿಯೊಂದು ಕಟ್ಟುತಿರುವೆ
ನಂಬುಗೆಯ ನಲ್ಮೆಯ 
ಗೂಡೊಂದು ಕಟ್ಟುತಿರುವೆ !!

Sunday, August 14, 2022

ಹಾಲು ಹಂಡೆ(ಹಾಲಂಡೆ)
      ಹಲವು ಬಾರಿ ಹಾಲು ಹಂಡೆಯ ಬಗ್ಗೆ ಬರೆದು ನನ್ನ ಮನಸ್ಸಿನಲ್ಲಿಯ ನನ್ನೂರಿನ ಪ್ರಕೃತಿ ಸೌಂದರ್ಯದ ಸವಿಯನ್ನು ಹೊರಹಾಕಿದ್ದೇನೆ. ಈಗ ಮತ್ತೊಮ್ಮೆ ಅದರ ಪ್ರಕೃತಿ ಸೊಬಗನ್ನು ಈ ಸ್ವಾತಂತ್ರ್ಯ ದ ಅಮೃತಮಹೋತ್ಸವ ಸಂದರ್ಭದಲ್ಲಿ ಈ ಸಮೂಹ ಮಾಧ್ಯಮದ ಮೂಲಕ ನನ್ನ  ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಮತ್ತೆ  ಕೈ ಬೆರಳುಗಳು ಮೊಬೈಲ್ ಕೀ ಮಣಿಗಳೊಂದಿಗೆ ಸರಸಕ್ಕಿಳಿದಿವೆ. ಘನ ಸರ್ಕಾರ ದಿನಾಂಕ 13.08.2022 ರಿಂದ  15.08.2022 ರವರಿಗೆ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವು ಮೂಲಕ ರಾಷ್ಟ್ರ ಪ್ರೇಮ ಮರೆಯಲು ಸೂಚಿಸಿದ ಪ್ರಯುಕ್ತ ಪ್ರತಿ ಮನೆ,ವಾಹನ, ಗಲ್ಲಿಗಲ್ಲಿಗಳಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಡಗರ ಕಾರಂಜಿಯಂತೆ ಪುಟಿಯುತ್ತಿದೆ. ಮುಂಜಾನೆ 8.00 ಗಂಟೆ ಯಿಂದ ಮಧ್ಯಾಹ್ನ  2.00.ಗಂಟೆಯವರೆಗೆ ಎಡೆಬಿಡದ ಸಡಗರದ ಸಂಭ್ರಮದ ಕಾರ್ಯಗಳು, ಮುಂಜಾನೆ ,ಪೌಢ ,ಪದವಿ ಪೂರ್ವ, ಪದವಿ ಕಾಲೇಜುಗಳ ಸಂಯುಕ್ತ ಧ್ವಜಾರೋಹಣ ,75 ವಸಂತ ಪೂರ್ತಿ ಗೊಳಿಸದ ಪ್ರಯುಕ್ತ ವಿದ್ಯಾರ್ಥಿಗಳಿಂದ ಅಮೃತ ಸಂಖ್ಯೆಯ  ಸಂಕೇತ ಸಂಖ್ಯೆಯ ನಿರ್ಮಾಣ. ವಿದ್ಯಾರ್ಥಿಗಳಿಂದ ಪಿರಾಮಿಡ್ ರಚನೆ,  ದೇಶ ಭಕ್ತಿ ಗೀತೆಗಳಂತೂ ದೇಶ ಭಕ್ತಿಯ ಪ್ರೇಮ ನಮ್ಮೆಲ್ಲರಲ್ಲಿ ರೋಮ ರೋಮಗಳಲ್ಲಿ ವಿದ್ಯುತ್ ಸಂಚಾರ ಮಾಡಿದೆವು. ತದನಂತರ ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರ ಹುದ್ದೆಯ ಪ್ರಭಾರ ವಹಿಸಿ ಕೊವಿಡ್ ಕೆಟ್ಟ ಕನಸುಗಳನ್ನು ಸಿವುಡುಗಟ್ಟಿ ಸೀಮೆ ಆಚೆ ದಾಟಸಿ  ಪ್ರಗತಿಯ ಮುನ್ನುಡಿ ಬರೆಯಲು ಹಾತೊರೆಯುತ್ತೀರುವ ಶ್ರೀ ವಿಠ್ಠಲ ಕಳಸಾ ರವರ ನೇತೃತ್ವದಲ್ಲಿ ಈರಣ್ಣ ದೊಡ್ಡ ಮನಿ ಕನ್ನಡ ಉಪನ್ಯಾಸಕರ  ನೇತೃದಲ್ಲಿ  ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ, ದೇಶ ಭಕ್ತಿಗೀತೆಗಳು ನಡೆದವು. ಇದು  ಇಲ್ಲಿಯವರೆಗೆ ಬಯಲಿನಲ್ಲಿ ನಿಂತು ಬಳಲಿ  ಬಂದ ವಿದ್ಯಾರ್ಥಿಗಳಿಗೆ ಬೆಲ್ಲದ ಹೋಳಿಗೆಯೇ ಸರಿ, ಯಾಕೆಂದರೆ ಸ್ಫರ್ಧೆಗಾಗಿ ಹೆಸರು ನೀಡಿದ ವಿದ್ಯಾರ್ಥಿಗಳಿಗಿಂತ  ಮೂರು ಪಟ್ಟು ವಿದ್ಯಾರ್ಥಿಗಳು ಸದೃಡ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಮಾತಾಡಿದ ವಾದ ಸರಣಿಗೆ ತಲೆದೂಗುವ ಸರಣಿ ನಮ್ಮ ದಾಗಿತ್ತು.ಇಷ್ಟೆಲ್ಲಾ ಶೈಕ್ಷಣಿಕ ಚಟುವಟಿಕೆಗಳ ಮಧ್ಯ ಬಹು ದಿನಗಳಿಂದ ನಮ್ಮ ಉಪನ್ಯಾಸಕ ಬಂಧುಗಳ ತಲೆಯಲ್ಲಿ ಅಂಕುರಿಸಿದ್ದ ಹಾಲು ಹಂಡೆಯ ಕನಸು ದಿಗ್ಗನೆ ಜಾಗೃತವಾಯಿತು, ಏಕೆಂದರೆ ಮಳೆಯಾಗುತ್ತಿದೆಯಲ್ಲವೆ ? ಹಾಲಿನಂತಹ ನೀರಿನಲ್ಲಿ ತೇಲುವ ಬಯಕೆ ಅದು ಹೆಮ್ಮರವಾಗಲು ಕೆಲವೇ ನಿಮಿಷಗಳು ಸಾಕಾಗಿತ್ತು, ನಾಳೆ ಹೋದರಾಯಿತು ಎನ್ನುವ ವಿಚಾರಗಳು ಈಗ ಪತನದ ಅಂಚಿಗೆ ಸರಿದು ಹೋದವು ಮುಂಜಾನೆ 8.00 ಗಂಟೆಯಿಂದ ಎಡೆಬಿಡದ ಕೆಲಸಗಳ ನಡುವೆ    ವಿದ್ಯಾರ್ಥಿಗಳೊಂದಿಗಿನ ದೇಶ ಪ್ರೇಮದ ಗುಂಗಲ್ಲಿದ್ದ ನಮಗೆ ಪ್ರಕೃತಿ ಮಡಿಲಿನ ಕರೆ.....ಹಾನಾಪೂರ ಎಸ್ ಪಿ ಗ್ರಾಮದ ರಾಜು ಕಳ್ಳಿಮನಿಯ ಟಂ ಟಂ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡಿತು.ಹಾನಾಪೂರ ಎಸ್ ಪಿ  ಗುಳೇದಗುಡ್ಡದಿಂದ ಬಹು ದೂರದ ಊರೇನಲ್ಲ ಕೇವಲ ಏಳು ಕಿ.ಮಿ.ಮಾತ್ರ ಹತ್ತರಿಂದ 20 ನಿಮಿಷದ ದಾರಿ. ಹಾನಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಒಂದು ದೊಡ್ಡ ಶೆಲೂಟ ಹೇಳಲೆ ಬೇಕು,ಏಕೆಂದರೆ ಈ ಪೂರ್ವದಲ್ಲಿ ನಾನೊಂದು ಆರ್ಟಿಕಲ್ ಬರೆದು ಹಾಲು ಹಂಡೆಗೆ  ದಾರಿ ಮಾಡಿದರೆ ಪ್ರವಾಸಿಗರಿಗೆ ಅನುಕೂಲ ವಾಗುತ್ತದೆ ಎಂದಿದ್ದೆ. ಅದಕ್ಕಾಗಿಯೆ ಈ ಸಿಮೆಂಟ ರಸ್ತೆ ಮಾಡಿದ್ದಾರೆ ಎಂದು ನಾನು ಹೇಳಲಾರೆ... ಹಾನಾಪೂರ ಎಸ್ ಪಿ  ಪಂಚಾಯತ್ ಗೆ . ನಮ್ಮೂರಿಗೆ ಅವಶ್ಯಕತೆ ಏನಿದೆ ಎಂಬುದನ್ನು ಚನ್ನಾಗಿಯೇ ಬಲ್ಲರು.. ಹೀಗಾಗಿ ಹಾಲು ಹಂಡೆಗೆ ಹೋಗಲು ಗಟ್ಟು ಮುಟ್ಟಾದ ರಸ್ತೆ ಮಾಡಿಸಿ ಪ್ರಕೃತಿ ಸೌಂದರ್ಯ ಸವಿಯಲು ಪ್ರಕೃತಿ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.ನಾಲ್ಕು ಬೈಕು ಒಂದು ಟಂ ಟಂ ಹಾಲ ಹಂಡೆಗೆ ಬಂದಾಗ ಹಾಲು ಹಂಡೆಯ ಹಿರಿದಾದ  ಕಲ್ಲು ಬಂಡೆಗಳು ಹಾರ್ದಿಕ ಸ್ವಾಗತ ನೀಡಿದವು.  ಹಂಡೆಯಲ್ಲಿಳಿಯಲು ಗಂಡೆದೆಯೇ ಬೇಕು ಆದರೇನು ಮಾಡುವುದು ! ಹಲವು ಬಾರೆ ನೋಡಿ ಬಂದ ಸ್ನೇಹಿತ, (ಈಗ ಪ್ರಭಾರ ಪ್ರಾಚಾರ್ಯ) ವಿಠ್ಠಲ ಕಳಸಾ ಮತ್ತು  ನಾನು ಹಂಡೆದಂತಹ ಹೊಂಡ ಇಳಿಯಲು ಮಾಡಿದ ಸಾಹಸ ಹಿಮಾಲಯ ಏರಲು ಮಾಡಿದ ತೇನಸಿಂಗನಿಗಿಂತ ಕಡಿಮೆ ಏನಲ್ಲ ,ಏಕೆಂದರೆ ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದನ ಅನುಭವದ ಆಧಾರದ ಮೇಲೆ ನಾವು ಇಳಿಯಲು ಮಾಡಿದ ಹುಚ್ಚು ಸಾಹಸ ಅಚ್ಚಳಿಯದೆ ನಮ್ಮ ಮನಪಟಲದ ಮೇಲೆ ಉಳಿಯುವಂತೆ ಮಾಡಿತು. ಏಕೆಂದರೆ ಇಪ್ಪಡಿ, ಹೊಂಗೆ ವಿವಿಧ ಜಾತಿಯ ಕಂಟಿಗಳು ನಾಕಾಬಂದಿಗೆ ನಿಂತ ಕಾವುಲುಗಾರಂತೆ ನಮ್ಮ ನ್ನು ತಡೆಯಲು ಬಂದವು. ನಾವೇನು ಬಿಟ್ಟು ಹಿಂದಿರುಗಲು ಬಂದ ಹೇಡಿ ಸೈನಿಕರೆ ? ಅಡ್ಡಲಾಗಿ ಕೈಚಾಚಿ ನಿಂತ ಶಿಪಾಯಿಗಳನ್ನು ಸರಿಸಿ ನಡೆದಂತೆ ಮುನ್ನಡೆದೆವು .ಸುಮಾರು ದಿನಗಳಿಂದ ದುಮ್ಮಿಕ್ಕಿ ಹರಿದು ಈಗ ಸೊರಗಿದ ಜಲಪಾತ ಈಗ ಲೇಟಾಗಿ ಬಂದ ಹುಡುಗರನ್ನು ಗದರುವಂತೆ ಭಾಸವಾಗುತ್ತಿತ್ತು. ನಮ್ಮ ಉಪನ್ಯಾಸಕರ ಬಳಗದ ಮಹಿಳಾ ಉಪನ್ಯಾಸಕೀಯರು ಹಾಗೂ ಸಿಬ್ಬಂದಿ ವರ್ಗ ನಮ್ಮ  ಹಿಂದೆಯೇ ನಾವೇನು ಕಡಿಮೆಯೇ ಅನ್ನುವಂತೆ ಬರುತ್ತಿತ್ತು ! ಕಿತ್ತೂರು  ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ನಾಡಿನವರಲ್ಲವೆ ! ಎನ್ನುವಂತೆ ಹಳಸುಗಟ್ಟಿದ ಕಲ್ಲು ಮುಳ್ಳಿನ ಮಧ್ಯ ಜುಳು ಜುಳು ಹರಿಯುವ ನೀರಲ್ಲಿ ತೆವಳುತ್ತಾ ಧಾವಿಸಿ ಬರುವ ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ಉಪನ್ಯಾಸಕಿಯರು, ದ್ವಿತೀಯ ದರ್ಜೆ ಸಹಾಯಕರು.....ಪೆನ್ನು ಹಿಡಿದ ಕೈಗಳೂ ಗನ್ನು ಹಿಡಿಯಬಲ್ಲವು ಎನ್ನುವಂತೆ ಬರುತ್ತಿರುವ ಮಹಿಳೆಯರ  ಸಾಹಸ ಮೆಚ್ಚಲೆ ಬೇಕು. ಇರಲಿ ಹೊಂಡ ತಲುಪಿದೆ ಮೇಲೆ ಸಿಕ್ಕ ಆ ಸಂತೃಪ್ತಿ ,ತಲುಪುವಾಗ ಪಟ್ಟ ಶ್ರಮದ ಫಲಕ್ಕಿಂತ ಸಾವಿರ ಪಾಲು ಮೇಲಾಗಿತ್ತು.  ಪ್ರಕೃತಿಗೆ ಸರಸಮನಾರು  ನಿರಾಭರಣ ಸುಂದರಿ. ಕೃತ್ರಿಮವಾಗಿ ರೂಪಿಸಿದ ನೂರು  ಸರೋವರಗಳನ್ನು ನೂಕಾಚೆ. ನನ್ನೂರಿನ ಕೊಳ್ಳ ಅದು ನನಗೆ, ಸ್ವರ್ಗಕ್ಕಿಂತ ಮಿಗಿಲು ಹಾಗಾಗಿ ಹಲವು ದಿನಗಳಿಂದಲೂ ಹೋಗಲು ತವಕದಿಂದದ್ದ ನನ್ನ ಸಹಪಾಠಿಗಳಿಗೆ ಅದರ ಬಗ್ಗೆ  ಹೇಳಿದ ಧನ್ಯತಾ ಭಾವ,ಆದರೆ ನಮ್ಮ ಸಂಸ್ಥೆಯ ಭೂಗೋಳ ಶಾಸ್ತ್ರ ದ ಉಪನ್ಯಾಸಕರಿಗೆ ಜಲಪಾತದ ಕೆಳಭಾಗದಲ್ಲಿ ಬಂದು ಸೌಂದರ್ಯ ವನ್ನು ಆಸ್ವಾದಿಸಲಾಗಲಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ ನಾವು ಇನ್ನೂ ಬೇಗ ಬರಬೇಕಿತ್ತಲ್ಲ ಎನ್ನುವ ಅಳುಕು.ಪ್ರತಿ ಕಾರ್ಯ ಕ್ಕೆ ಸದಾ ಸಿದ್ದ ಎನ್ನುವ ಪಟ್ಟಣಶೆಟ್ಟಿ ಯವರು  ಜಲಪಾತದ  ಮೇಲ್ಬಾಗದಿಂದಲೆ ಅಭಯ. ಅವರು ಸೆರೆಹಿಡಿದ ಛಾಯಾಪ್ರತಿ ದ್ರೋಣದಲ್ಲಿ  ಸೆರೆಹಿಡಿದಂತೆ ಕಾಣುತ್ತಿರುವುದು ನಮ್ಮೆಲ್ಲ ಸಹೋದ್ಯೋಗಿಗಳ ಸಂತೋಷಕ್ಕೆ ಸಾಕ್ಷಿಯಾಯಿತು. ಇನ್ನು ನಮ್ಮ ಸಮಾಜ ಶಾಸ್ತ್ರ ಉಪನ್ಯಾಸಕರ ಊಟದ ಉಸ್ತುವಾರಿ. ...! ಮೊದಲೆ ಸಮಾಜ ಶಾಸ್ತ್ರಜ್ಞರು ಸರ್ವ ಜನರ ಸುಖಗಳ ಮೂಲ ಅರಿತವರು ಸಿಹಿ ಕಾರಗಳ ಸಮ ಮಿಶ್ರಣ ಮೇಲೆ ಸವಾರಿ, ಹೊಟ್ಟೆ ಬಿರಿಯುವಂತಹ ಬೋಜನ ಮೇಲೊಂದು ಜವಾರಿ  ಬಾಳಿ ಹಣ್ಣು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಮೇಡಂ ನೀಡುವ ಎಲೆ ಅಡಿಕೆ... ಅದನ್ನು  ಒಡೆಯಲು ಕಲ್ಲಿಗೂ ಕೊರತೆ ....? ಬಂಡೆಯ ನಾಡಿನಲ್ಲಿ ಅಡಿಕೆ ಒಡೆಯಲು ಗುಂಡುಗಲ್ಲಿಗೂ ಬರ ! ನೂರು ಅಂಡಗ ಕಾಳು ಬೆಳದರೂ ಸೆರಗು ಜೋಳ ತಿನ್ನು ವ ರೈತನಂತೆ ಪರಿತಪಿಸಿದ್ದಂತು ಸತ್ಯ .ಆದರೆ ಬಂಡೆಯ ನಾಡಿನ ಜಲಪಾತದ ಬಡಿವಾರ ಮಳೆಯಾದ ಮರುದಿನ ಪೂರ್ತಿ  ನೋಡುವ ಶಪತದೊಂದಿಗೆ ಹಾಲು ಹಂಡೆಗೆ ವಿದಾಯ ಹೇಳಿ ಅಣ್ಣನ ಹೊಲದ ಸೂರ್ಯಕಾಂತಿಯ ಹೊಲದಲ್ಲಿ ಪುಷ್ಪ ದಂತೆ ಮುಖ ಅರಳಿಸಿ ಗಣಿತ ಉಪನ್ಯಾಸಕರ ಮೊಬೈಲ್  ಕ್ಯಾಮರಕ್ಕೆ ಆಹಾರವಾದೆವು.ಪಶ್ಚಿಮದ ಆಗಸದಲ್ಲಿ ಸೂರ್ಯ ನೂ ಕರ್ತವ್ಯಮುಗಿಸಿ ಮನೆಗೆ ನಡೆದಿದ್ದ ಈಗ  ಕಳ್ಳಿಮನಿ ರಾಜ ಮತ್ತೆ ಜೈಲಿಗೆ ತಳ್ಳುವ ಭಟನಂತೆ ನಮಗಾಗಿ ಕಾಯುತ್ತಿದ್ದ...ಅದೆ ಬದುಕೆಂಬ ಬಂದಿಖಾನೆಗೆ.. ಮತ್ತೆ ಹೆಂಡತಿ ..ಮಕ್ಕಳು... ಸಂಸಾರ ಕೃತ್ರಿಮ ಬದುಕು......ಮತ್ತೆ  ಬರುವೆ ಹಾಲಹಂಡೆ (ಹೊಂಡ) !!!! ನಮಸ್ಕಾರಗಳು.

Tuesday, August 9, 2022

* ಅರಳುವವು ಮುಂದೆ *

ನೂರು ಹೂವುಗಳು 
ಅರಳುವವು ಮುಂದೆ 
ನಾನವರ ಹಿಂದೆ ಹಿಂದೆ!!

ನಾ ತುಳಿದ ಹಾದಿಯ ಗಾದೆ
ಅದಿವರಿಗೆ ಪಡೆವ ಗಾದಿ 
ಮಲಗಲು ಬಿಡದೆ ನಡೆಸುವೆನು 
ಮುಂದೆ ಮುಂದೆ !!

ಕಲ್ಲು ಮುಳ್ಳಿನ ಅಂಕು 
ಡೊಂಕಿನ ಕವಲು ದಾರಿಯ 
ಬಯಲು ಆಲಯ ಗಣ
ಕಾಯುವೆನು ಹಿಂದೆ ಹಿಂದೆ !!

ಬಿಂಕದ ನಡಿಗೆಯನು ಕಲಿಸಿ
ಅಂಕದ ಹುಚ್ಚನೊಮ್ಮೆಬಿಡಿಸಿ
ಅಂಕೆಯಲಿಟ್ಟು ನಡೆಸುವೆನು 
ಮುಂದೆ ಮುಂದೆ !!

ದೇವರ ಗುಡಿಗೊಂದು ದಳ
ಹೆಂಗಳೆಯ ಮುಡಿಗೊಂದು ಮಳ
ಅಂಗವೆ ಮೇಲೊಂದು ದವಳ
ಸತ್ಸಂಗ ಸೇರಿಸುವೆನು 
ಮುಂದೆ ಮುಂದೆ !!

ಹಸಿದವನಿಗೆ ಹೊಸೆದು ಬಡಿಸಿ
ಕಸಿದವನಿಗೆ ಬುದ್ದಿಗಲಿಸಿ
ನಶೆ ಇಳಿಸಲು ಹೊಸ ತಂತ್ರ 
ಬಳಸುವೆನು ಮುಂದೆ ಮುಂದೆ !!

ತೋಟದ ಮಾಲಿ ನಾ ಹಟಯೋಗಿ 
ಪಾಠವೆ ಪರಿಮಳ, ಆಟವೆ 
ಅಂಗ ಸೌಸ್ಟವ ಅನುದಿನವೂ 
ಕಳೆ ಕೀಳುವೆ ಹಿಂದೆ ಹಿಂದೆ !!

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...