Friday, November 1, 2024

ಗುಡ್ಡದೂರು



ಗುಡ್ಡದೂರು

ಗುಡ್ಡದ ಊರಿನವರಾದರೇನು 
ದೊಡ್ಡವರೆ ನಾವೆಲ್ಲ ! 
ಕಡ್ಡಿ ಮುರಿದಂತೆ ಮಾತನಾಡುವವರು
ಖೆಡ್ಡಾ ತೊಡಲಾಗದು ನಮಗೆಲ್ಲ ! 
ಬಯಸಿದರೆ ? ದಡ್ಡರೆ ನಿವೆಲ್ಲಾ  
ಏಕೆ ಹೇಳಿ ? ಬರಿ ಕಲ್ಲುಗಳೆ ಇಲ್ಲೆಲ್ಲಾ.॥

ಬಡವರ ಊರಿನವರಾದರೇನು !
ದುಡಿಮೆಗಾರರು ನಾವೆಲ್ಲ 
ಪಡಿಯೊಡೆದು ಗಿಡ ನೆಡುವವರು
ಕಿಡಿ ಇಡಲಾಗದು ನಮಗೆಲ್ಲ 
ಬಯಸಿದರೆ ?ದಡ್ಡರೆ ನೀವೆಲ್ಲಾ
ಏಕೆ ಹೇಳಿ.? ಬರಿ ಜಾಲಿ ಗಿಡಗಳೆ ಇಲ್ಲೆಲ್ಲಾ ॥

ಎತ್ತರದ ಊರಿನವರಾದರೇನು
ಸುತ್ತುವೆವು ಜಗವೆಲ್ಲಾ
ಸತ್ಯಕ್ಕೆ ಹೆಸರಾದವರು
ಸುತ್ತಿ ಬಳಸಿ ಸಿಕ್ಕಿಸಲಾಗದು ನಮಗೆಲ್ಲ
ಬಯಸಿದರೆ ? ದಡ್ಡರೆ ನೀವೆಲ್ಲಾ
ಏಕೆ ಹೇಳಿ ? ಕನ್ನಡ ಕಣ್ಮಣಿಗಳೆ ಇಲ್ಲೆಲ್ಲಾ॥

ಕಣಗಳೂರಿನವರಾದರೇನು
ಹಣದಾಸರು ನಾವಲ್ಲ
ಹೊಣೆಯರಿತು ನಡೆಯುವವರು 
ಒಣಭೇಧದಿಂದ ಹಣಿಯಲಾಗದು ನಮ್ಮನ್ನೆಲ್ಲಾ
ಬಯಸಿದರೆ ? ದಡ್ಡರೆ ನೀವೆಲ್ಲಾ
ಏಕೆ ಹೇಳಿ ? ಮಾನವತೆ ಒಡಮೂಡಿದೆ ಇಲ್ಲೆಲ್ಲಾ॥

ಗುಳೆ ಬಂದವರಾದರೇನು
ಹೊಳೆಯ ಸೆಳುವಿಗಂಜುವವರು ನಾವಲ್ಲ
ಗೆಳೆತನದ ಪ್ರೀತಿಯ ಸೆಳೆತ ಕಂಡವರು
ಸುಳಿಗಳಾಗಿ ಸೆಳೆಯಲಾರಿರಿ ನಮ್ಮನ್ನೆಲ್ಲಾ
ಬಯಸಿದರೆ ? ದಡ್ಡರೆ ನೀವೆಲ್ಲ
ಏಕೆ ಹೇಳಿ ? ಪ್ರವಾಹಗಳೆ ಇಲ್ಲಿಲ್ಲಾ॥
 
ಗುಡ್ಡದೂರುಗಳಾದರೇನು
ಹಡೆದದ್ದು ಹಾನಾಪೂರ ಪಡೆದದ್ದು ಗುಳೇಗುಡ್ಡ 
ತಿದ್ದಿದ್ದು ಜಮಖಂಡಿ, ನಡೆಸಿದ್ದು ಸಾಲವಾಡಗಿ
ಓಡಿಸಿದ್ದು ಹಿರೇಹಾಳ ತಿರುಗಿಸಿದ್ದು ಬೀಳಗಿ
ಕುಣಿಯುತ್ತಿರುವೆ ನಾ ಲಾಳಿಯಂತೆ ಇಲ್ಲೆಲ್ಲಾ
ಏಕೆ ಹೇಳಿ ! ನೇಯಬೇಕು ಬದುಕಿನ ಬಟ್ಟೆ ಇಲ್ಲೆಲ್ಲಾ  ॥








2 comments:

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...