Monday, June 15, 2026

ಹಾನಾಪೂರದಲ್ಲೊಂದು ನಕ್ಷತ್ರ

 
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾಡಿದ ಸಾಧನೆಯಿಂದ ರುಜುವಾತಾಗಿದೆ.
ಕರಿಯಪ್ಪ ಮಾದರ ಕಲಿತದ್ದು ಅದೇ ಊರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಯಿಯು ನಿರಕ್ಷರಿ, ಮುಂದಿನ ಶಿಕ್ಷಣ ಕಲಿತದ್ದಾರೂ ಯಾವ ಶಾಲೆಗಳು? ಅವೆಲ್ಲವೂ ಸರ್ಕಾರದ ಶಾಲೆಗಳು ಮಾಧ್ಯಮಿಕ ಶಿಕ್ಷಣ ಹಾನಾಪೂರ ಎಲ್ ಟಿ ಪ್ರೌಢಶಾಲೆಯಲ್ಲಿ ,  ಪದವಿ ಪೂರ್ವ ಶಿಕ್ಷಣ, ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜು ಗುಳೇಗುಡ್ಡ ದಲ್ಲಿ ಇದರಿಂದ ನಮಗೆ ಅರ್ಥವಾಗುವ ಅಂಶ ಏನೆಂದರೆ ಪ್ರತಿಭೆ ಅರಳಲು ಲಕ್ಷ  ಎಣಿಸಬೇಕಾದ ಶಿಕ್ಷಣ ಸಂಸ್ಥೆಗಳೇ ಬೇಕಿಲ್ಲ ಎಂದು. ಯಾವುದೆ ಒಂದು ಕಾಲೇಜಿನಲ್ಲಿ ಒಂದು ವಿದ್ಯಾರ್ಥಿ ಇಂತಹ ಶಾಧನೆ ಮಾಡಿದರೆ ಆವರ ಪೋಟೊ ಹಾಕಿ ಅದನ್ನು ಲಾಭ ಮಾಡಿಕೊಳ್ಳಲು ತವಕಿಸುವ, ಒಂದು  ವರ್ಷ ಮಾಡಿದ ಸಾಧನೆಯನ್ನು ಮತ್ತೆ ಮತ್ತೆ ಹಾಕುವ ಇಂದಿನ ದಿನದಲ್ಲಿ  ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿ ಇಂತಹ  ಸಾಧನೆ ಮಾಡಿದ ಕರಿಯಪ್ಪ ನಿಜವಾಗಿಯೂ ಅಭಿನಂದನಾರ್ಹ. ಆಡು ಆಕಳು ಮೇಯಿಸುವ ತಾಯಿಗೆ IIT ಅಂದರೇನು ಎನ್ನುವ  ಪರಿಕಲ್ಪನೆಯೂ ಇಲ್ಲ ಆದರೆ ಅಭಿನಂದನೆಗಳ ಮಹಾಪೂರ ಹರಿದು ಬಂದದ್ದು ನೋಡಿ ಚನ್ನಾಗಿ ಕಲಿತುಕೊಂಡಿದ್ದಾನೆ ಎಂದುಕೊಂಡಿರಬಹುದು. ಗುಡ್ಡದ ಊರಿನಲ್ಲಿ ಜನಿಸಿದ ಕರಿಯಪ್ಪ ಇನ್ನೂ ದೊಡ್ಡವನಾಗಬೇಕು.ಕಾಲೇಜಿನ ಎಲ್ಲ ಉಪನ್ಯಾಸಕರ  ಆಶೀರ್ವಾದವಿದೆ ಮತ್ತು ಊರ ಗ್ರಾಮ ದೇವತೆ ಕರಿಯಮ್ಮನ ಆಶೀರ್ವಾದವಿದೆ. ಸಾಧನೆ ಸಾಧಕನ ಸೊತ್ತು ಎನ್ನುವ ಮಾತನ್ನು  ಪೂರ್ಣ ಗೊಳಿಸಲು ಅವಕಾಶ ದೊರತಿದೆ ಇದು ಅರ್ಧ ದಾರಿ ಮಾತ್ರ, ಪೂರ್ಣ ಗೊಳಿಸಿ ಹಾನಾಪೂರ ಎಸ್ ಪಿ ಹಾಗೂ ಗುಳೇಗುಡ್ಡ ಬಾಲಕರ ಸರ್ಕಾರಿ ಪ.ಪೂರ್ವ ಕಾಲೇಜಿನ ಹೆಸರನ್ನು ಭಾರತದ ಇತಿಹಾಸದಲ್ಲಿ ದಾಖಲಿಸಬೇಕಾಗಿದೆ.
      ಈ ಹುಡುಗ ನನ್ನ ಊರಿನವನು ಎನ್ನುವದು ಎಷ್ಟು ಹೆಮ್ಮೆಯೋ ಅಷ್ಟೆ ಹೆಮ್ಮೆ ನನ್ನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ವಿದ್ಯಾರ್ಥಿ ಎನ್ನುವುದು ಇನ್ನೂಂದು ಹೆಮ್ಮೆಯ ವಿಷಯ. ಅವರ ಅಣ್ಣ ನೂ ಬಾಲಕರ ಸರ್ಕಾರ ಪ.ಪೂ.ಕಾಲೇಜಿನ ವಿದ್ಯಾರ್ಥಿ, ಪ್ರತಿಭೆಯಿಂದ ಅರಳಿ ಪೋಲೀಸ್ ಕೆಲಸ ಪಡೆದು ಈಗ ಮಂಗಳೂರಿನಲ್ಲಿ ಪಿ.ಸಿ ಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.ನಯ ವಿನಯದ ಅವನ ವರ್ತನೆ ,ಕಲಿಯುವ ಹಂಬಲ ಅವನನ್ನು ಸರ್ಕಾರದ ಕೆಲಸ ಮಾಡುವಂತೆ ಮಾಡಿತು.ಈಗ ಆತನ ತಮ್ಮ ಕರಿಯಪ್ಪನೂ ಸತತ ಪ್ರಯತ್ನ ಇನ್ನೂಂದು ಹೆಜ್ಜೆ ಮುಂದೆ ಹೋಗುವಂತೆ ಮಾಡಿದೆ .
    ಸರ್ಕಾರಿ ಪ.ಪೂರ್ವ ಕಾಲೇಜಿಗೆ ಇಂದು ದಿನಾಂಕ 15.06.2026 ಹಬ್ಬದ ದಿನ ಕಾರಣ ಇಷ್ಟೆ ಕರಿಯಪ್ಪ ನನ್ನು ಸನ್ಮಾನ ಮಾಡಲು ಇಲಾಖೆಯ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪುಂಡಲಿಕ ಕಾಂಬಳೆ ಹಾಗೂ ಬದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಸೇನ ಚಿಮ್ಮನಕಟ್ಟಿಯವರು ನಮ್ಮ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಯನ್ನು ಗೌರವಿಸದರು ಈ ಸಂದರ್ಭ ದಲ್ಲಿ ನಮ್ಮ ಸಂಸ್ಥೆಯ ರಸಾಯನಶಾಸ್ತ್ರ ದ ಉಪನ್ಯಾಸಕಿಯರು  ಹೇಳಿದ ಮಾತು ಇಲ್ಲಿ ಬರೆಯಬೇಕಿನಿಸಿತು.ಅದನೆಂದರೆ "ಶಿಕ್ಷಣ ಕ್ಕೆ ಅದ್ಭುತ ಶಕ್ತಿಯಿದೆ" ಮಾನ್ಯ ಶಾಸಕರು ಹಾಗೂ ಉಪನಿರ್ದೇಶಕರು ಒಂದೇ ಅವಧಿಯಲ್ಲಿ ನಮ್ಮ ಸಂಸ್ಥೆಗೆ ಬಂದ ಉದಾಹರಣೆಯಿರಲಿಲ್ಲ ಈಗ ನಾವು ನೋಡಿದೆವು.ಎನ್ನಬೇಕೆ ? ಪ್ರಾಯಶಹ ಇದು ಸರಳವಾಗಿ ಮಾತನಾಡಿದ ಮಾತಾಗಿರಬಹುದೇನೋ ಸರಿ. ಆದರೆ ಶಿಕ್ಷಣ ಬಲದ ಮಹತ್ವವೇ ಅಂತಹದು ಶ್ರೇಷ್ಠ ವ್ಯಕ್ತಿಗಳೂ ಕಣ್ಣು ತೆರೆದು ನೋಡುವಂತೆ ಮಾಡಬಲ್ಲದು.ಇಂದು ನಮ್ಮ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾನ್ಶ ಶಾಸಕರು ಮಾತನಾಡಿದ್ದು ಅದು ಭಾಷಣವಾಗಿರಲಿಲ್ಲ ಬದಲಾಗಿ ಅನುಭವಗಳನ್ನು ಉಣಬಡಿಸಿದ ಕೈಗಳಾಗಿದ್ದವು ಹಾಗಾಗಿ ನಮ್ಮ ಸಂಸ್ಥೆಯ 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಂತ್ರ  ಮುಗ್ಧ ರಾಗಿದ್ದರು ಕಾರಣ ಇಷ್ಟೆ ಐಐಟಿ ಎಂದರೇನು ಎಂದು ಅರಿಯದ ಮುಗ್ಧ ತಾಯಿಯ ಕಾರ್ಯ ವನ್ನು ಶ್ಲಾಘಿಸುತ್ತಾ ಮಕ್ಕಳೊಂದಿಗಿನ ಅವರ ಪ್ರಶ್ನೋತ್ತರ ರೀತಿ ಶಿಕ್ಷಣ ತಜ್ಞ  ಗುರುರಾಜ ಕರ್ಜಗಿಯವರ ಮಾತುಗಳನ್ನು ನೆನಪಿಗೆ ತರುವಂತೆ ಮಾಡಿದವು ಇನ್ನು ಉಪನಿರ್ದೇಶಕರಾದ ಪುಂಡಲಿಕ  ಕಾಂಬಳೆಯವರು  ಇಲಾಖೆಯ ಪರವಾಗಿ ಸನ್ಮಾನ  ಮಾಡಿ ಸರ್ಕಾರದ ಸಂಸ್ಥೆಗಳಲ್ಲಿ ಸಾವಿರ ಕರಿಯಪ್ಪ ಗಳು ಸೃಷ್ಟಿಯಾಗಲಿ ಎಂದದ್ದು ವಿದ್ಯಾರ್ಥಿಗಳ ಮನದಲ್ಲಿ ಛಲದ ಅಲೆಯನ್ನೆ ಸೃಷ್ಟಿಸಿತು. ಹಾನಾಪೂರ ಗ್ರಾಮದ ಯಮನಪ್ಪ ಹೀರೇಗೌಡರ ಊರಿನ ಅಭಿಮಾನದಿಂದ ವಿದ್ಯಾರ್ಥಿಯ ಮುಂದಿನ ವ್ಯಾಸಂಗಕ್ಕೆ 50 ಸಾವಿರ ಪ್ರೋತ್ಸಾಹಧನವನ್ನು ನೀಡಿದ್ದು ಸಣ್ಣ  ವಿಷಯ ವೇನಲ್ಲ  ನಮ್ಮ ಸಂಸ್ಥೆಯ ಪ್ರಾಚಾರ್ಯ ಹಾಗೂ ಉಪನ್ಯಾಸಕರಿಗೆ ಸಡಗರವೊ ಸಡಗರ,ವಿದ್ಯಾರ್ಥಿಗಳಲ್ಲಿ ಸಂಚಲನ,  ನಾನೂ ಸಾಧನೆ ಮಾಡಬೇಕು ಎನ್ನುವ ಅಲೆ ಹುಟ್ಟಿದ್ದಂತು ಸತ್ಯ. 
ಅಭಿನಂದನೆಗಳು ಕರಿಯಪ್ಪ. 

      

Thursday, February 12, 2026

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು 
       ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳನ್ನು
ಆಸ್ವಾದಿಸುವ ರೂಪ ಬೇರೆ ಬೇರೆ ಆಗಿರುತ್ತದೆ ಅವುಗಳಲ್ಲೊಂದಿಷ್ಟುಇಲ್ಲಿ ಮೇಲಕು ಹಾಕುವದ ರ ಮೂಲಕ ಸಂತೋಷ  ಪಡುತ್ತಿದ್ದೇನೆ.ಅಪ್ಪ ಗಳೆ ಬಿಟ್ಟುಕೊಂಡು ಹೊರಟಾಗ ಎತ್ತಿನ ಆಶಿಯ ಮೇಲೆ ಕುಳ್ಳರಿಸಿ ಬೀಳಬಾರದೆಂದು ಮೇಳಿ ಹಿಡಿಸಿ ಸಂತೋಷ ಪಡಿಸಿದ. (ಬಹುಶಃ ಈಗಿನ ದಿನಮಾನದಲ್ಲಿ ಆವನ ರೀತಿಯಾಗಿ ಮಕ್ಕಳನ್ನು  ಆಶಿ ಮೇಲೆ ಕುಳ್ಳಿರಿಸಿ ಹೊಲಕ್ಕೆ ಕರೆದುಕೊಂಡು ಹೋದದ್ದು ನಾನು ಕಂಡಿಲ್ಲ)  ಮಧ್ಯ ರಾತ್ರಿಯಲ್ಲಿ ಎದ್ದು ಬುಂದೆದುಂಡಿ ಬೇಕು ಎಂದು ಹಠ ಹಿಡಿದಾಗ ರಾತ್ರಿ ಅಂಗಡಿ ತಗಸಿ ಬುಂದೆ ಕೊಡಸಿದ. ಅದಕ್ಕಿಂತ ಮೊದಲು ಸಣ್ಣವನಿದ್ದಾಗ ಹೆಗಲು ಮೇಲೆ ಹತ್ತಿಸಿಕೊಂಡು ಬಿತ್ತಿದ್ದಾನಂತೆ ಆಗ ನಾನು ಕಾಗೆಗಳನ್ನು ಓಡಿಸಲು ಕೇಕೆ ಹಾಕಿದ್ದನ್ನು ಹೇಳಿ ನೀ ಹಠವಾದಿಯಾಗಿದ್ದಿ ಎಂದು ಪುಟಗಟ್ಟಲೆ ಹೇಳಿದ್ದಾನೆ. 

* ಅಪ್ಪ ನಮ್ಮೆಲ್ಲರ ಛಪ್ಪರ *

ಅಪ್ಪನೆನ್ನುವ ಅಕ್ಷರವೆ ಹಾಗೆ 
ಚಪ್ಪರದಂತೆ ನೆರಳು ನೀಡಿ 
ಅಪ್ಪಿಕೊಂಡು ಓಡುವ ಸಾರೋಟ॥

ಅನುದಿನವೂ ಅಕ್ಕರೆಯ ಶ್ರೀರಕ್ಷೆ, 
ಎನ್ನ ಬೆಳಸಿದ ಆಗಸದೆತ್ತರದ ವೃಕ್ಷ
ಕಾಗೆ ಗುಬ್ಬಚ್ಚಿಯಂತೆ ಗೂಡು ಕಟ್ಟಿದ ಅಪ್ಪ॥

ಸತ್ಯದ ಆಲ ನೆಟ್ಟು ನೀರು ಗೊಬ್ಬರವೆರದು
ನಿತ್ಯಸತ್ಕರ್ಮದ ಬೇಲಿ ಸುತ್ತು ಹೆಣೆದು 
ನರಿ ತೋಳ ಸುಳಿಯದಂತೆ ಕಾದ ಅಪ್ಪ॥

ನೆಲೆನಿಂತ ಹೊಲವೆ ಉರಿದರು  
ಛಲದಿಂದ ಅರಿವಿನ ನಗೆ ಬೀರಿ
ದೊರೆಯಂತೆ ಬೆಳೆಸಿದ ಅಪ್ಪ ॥

ಬಿರುಗಾಳಿ ,ಮಳೆಯಿಲ್ಲಾ ಬರಿ ದೂಳು
ಉರಿ ಬಿಸಲಿನಲ್ಲಿ ಬರಿಗಾಲ ಪಯಣ
ಹೊರೆಯಾದರು ಬಾರ ಎಳೆದ ಅಪ್ಪ .॥

ಹೊರಗೆ ದುರ್ವಾಸ ಮುನಿ
ಒಳಗೆ ಮಹಾಭಾರತದ ವ್ಯಾಸ
ಇಳೆಗೆ ಶ್ರೀರಾಮನ ಪ್ರೀತಿ ತಂದ ಅಪ್ಪ ॥

ಇಂದು ಇಲ್ಲ ಮುಂದೆ ಸಿಗುವುದಿಲ್ಲ
ಹುಡುಕಲು ಹೋಗಬೇಕಿಲ್ಲ
ಎದೆಯಾಳದಲ್ಲಿ ಅಡಗಿ ಕುಳಿತ ಅಪ್ಪ॥

Sunday, January 25, 2026

ನಗರೀಕರಣ

ನಾಗರಿಕತೆ ಬಂದದ್ದೆ ನಗರಗಳ 
ಉಗಮದಿಂದ ಇದು ಜೀವನ ಸುಲಬಗೊಳಿಸಲು 
ಮಾನವ ಮಾಡಿದ ಅನ್ವೇಷಣೆಯ ದಾರಿ
ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ 
ಕೃಷಿ ಭೂಮಿ ಕುಗ್ಗುತಿದೆ 
ಹೊಸ ಬಡಾವಣೆಯ ಗಾಳಿಯಿಂದ .
ಇಲ್ಲಿ ಇನ್ನು ಮುಂದೆ ಬೆಳೆ ಬೆಳೆಯುವುದಿಲ್ಲ
ಬಿಲ್ಡಿಂಗಗಳು ಬೆಳೆಯುತ್ತವೆ
ಇನ್ನು ಮುಂದೆ ಇಲ್ಲಿ ಬೆಳದಿಂಗಳು ಚೆಲ್ಲುವುದಿಲ್ಲ 
ಬಲ್ಬುಗಳೆ ಬೆಳದಿಂಗಳನ್ನು ನೀಡುತ್ತವೆ
ಇಲ್ಲಿ ಹಸು ಕುರಿ ಮೇಕೆ  ಮೇಯುವುದಿಲ್ಲ
ಮನುಷ್ಯರು ಮೇಯುತ್ತಾರೆ
ಇಲ್ಲಿ ಹಕ್ಕಿ ಪಕ್ಕಿ ಗಳು ದ್ವನಿ ಮಾಡುವುದಿಲ್ಲ
ದ್ವನಿ ವರ್ಧಕಗಳು ಅಬ್ಬರಿಸುತ್ತವೆ.
ಇಲ್ಲಿ ಭೂಮಾತೆ ಗಂಟಲು ಹಿಚುಕುತ್ತಾರೆ
ಹೊಟ್ಟೆಯನ್ನು ಬಗೆದು ನೀರು ಬಸಿಯುತ್ತಾರೆ 
ಇಲ್ಲಿ ಇನ್ನು ಪೈಪುಗಳೆ ನರನಾಡಿಗಳು
ಎಲೆಕ್ಟ್ರಿಕ್ ಕಂಬಗಳೆ ಸ್ವಾಗತ ಕಮಾನುಗಳು
ನಗರಸಭೆಯವರೆ ವೈದ್ಯರು 
ಹಂದಿಗಳೆ ದಾದಿಯರು
ಹೊಂದಿಕೊಂಡವರು ಉಳಿತಾರೆ 
ಹೊಂದದಿದ್ದರೆ ಚಂದಾ ವಸೂಲಿ 
ಮದ್ದು ನೀಡುವವರಿಗೇನು ಕಡಿಮೆ
ಸರಿಯಾದ ಸಮಯಕ್ಕಾದರೆ ಸೀದಾ ನಡಿ
ಸಾವಿರ ಟೆಸ್ಟಮಾಡಿ ಸೋತರೆ ಗಾಡಿ ಬಿಡಿ
 
 



Wednesday, January 7, 2026

ಸಿದ್ಧರಾಮನ ಚರಿತೆ

ಸಿದ್ಧರಾಮನ ಹುಂಡಿಯಿಂದೆದ್ದು ಬಂದು
ಗೆದ್ದು ಬೀಗಿದ ಸಿದ್ಧರಾಮನ ಚರಿತೆಯಿದು
ಸದ್ದು ಮಾಡುತಿದೆ ಕರ್ನಾಟಕ ದೇಶದೊಳು॥

ಕುರಿಕಾಯುವ ಕುರುಬರ ಕುಲ ತಿಲಕ
ಸರಿ ಕಂಡಂತೆ ನಡೆದು ಗುರಿ ತಲುಪಿ
ದೊರೆಯಾದನು ಕನ್ನಡದ ದೇಶದೊಳು ॥

ವಿಜ್ಞಾನದ ಬಲದಿಂದ ಸುಜ್ಞಾನದ ಪ್ರಭೆ 
ಕುಹಕಳ ಮಧ್ಯ ಪಡೆದ ಕಾನೂನು ಪ್ರಜ್ಞೆ
ವೈಚಾರಿಕತೆ ಮೈಗೂಡಿಸಿಕೊಂಡ ಮನದೊಳ್॥

ಬುದ್ಧ ಬಸವ ಅಂಬೇಡ್ಕರ್ ರ ಗ್ರಹಿಸಿ
ಶುದ್ಧ ಲೋಹಿಯಾ ಸಿದ್ದಾಂತ ಪರಿಪಾಲಿಸಿ
ಇವನೆದ್ದು ಬಂದ ತಳಸಮುದಾಯದೊಳ್॥

ಹಸಿವನ್ನು ಹೊದ್ದು ಮಲಗಿದ ಜನರಿಗೆ
ಹೊಸ ಆಶಾಕಿರಣವಾದ ಅನ್ನರಾಮಯ್ಯ 
ಬೆಸೆದ ಮಾನವೀಯತೆ ಜಗದೋಳ್॥  

ಕಾಲದ ಗರಡಿಯ ಚೇಲಾಗಳ ಸಿಂಹ ಸ್ವಪ್ನ 
ಸೋಲಿನ ಸುಳಿಗೆ ಸವಾಲಿನ ಚಾಣಕ್ಯ ತಂತ್ರ
ಮಂತ್ರವೊಂದೇ ಗೆಲ್ಲುವ ರಣತಂತ್ರ ವ್ಯೂಹದೊಳ್॥

ಕನ್ನಡದ ಕುವರ ವ್ಯಾಕರಣ ಪಂಡಿತ 
ತನ್ನ ನಾಡಿನ ಅಂಕಿ ಸಂಖ್ಯೆಗಳ ಗಣಿತಜ್ಞ
ಶಿಕ್ಷಕ ತಾ ತಿದ್ದುವನು ಪ್ರಶ್ನೆಯಾ ಶಾಲೆಯೊಳ್

ಪ್ರೀತಿಸಿದರೆ ಸ್ವಾಭಿಮಾನದ ಪುತ್ರ 
ವಿರೋಧಿಸದರೆ ಕೇಸರಿ, ನಡುಗಬೇಕು ಶತೃ 
ದೊರೆ ತಾ ಪ್ರೀತಿಸುವ ಬಡವರ ಛತ್ರದೊಳ್
 



 







Wednesday, December 31, 2025

ಮರೆಯಾದ ಶ್ರೇಷ್ಠ ಪ್ರೀತಿ

ಅರಿಯುವ ಮುನ್ನ ಮರೆಯಾಯಿತು 
ಶ್ರೇಷ್ಠ ಪ್ರೀತಿಯನ್ನು ನೀಡುವ ಜೀವ 
ಶಿವನ ಕರೆಗೆ ಭುವನ ತೊರೆದು
ಜೀವನದ ಕೊನೆ ಗುರಿತಲುಪಿದಳಮ್ಮ॥
 
ಎಲ್ಲರ ಮನೆಯ ದೋಸೆಯೂ ತೂತೆ
ಕಲ್ಲಿನ ದೇವರಿಗೆ ಬೆಲ್ಲ ಸಕ್ಕರೆ ನೈವೇದ್ಯ 
ಬಲ್ಲೆವೇನಿವಳ ಬದುಕಿದ ಎಲ್ಲ ಕಷ್ಟಗಳಾ
ಸೊಲ್ಲೆತ್ತದೆ ಸುತ್ತಿ ಮಾಯವಾದಳಮ್ಮ॥

ಕತ್ತು ಬಗ್ಗಿಸಿ ಕತ್ತೆಯಂತೆ ದುಡಿದು
ನಿತ್ಯ ಕೊರೆಯಿಸಿಕೊಂಡಳು ಗರಗಸ 
ಸಕ್ಕರೆ ಸವರಿದ ಕಹಿಗುಳುಗಿ ನುಂಗಿ
ಮಿಕ್ಕಿ ನಡೆವ ಛಲವೆ ನಿನ್ನ ಆಭರಣವಮ್ಮ ॥
 
ಸ್ವಾತಂತ್ರ್ಯ ವೆಂಬುದು ಅಂಬರದ ತಾರೆ 
ಗಟ್ಟಿಯಾಗಿ ನಿಂತರು ಸಿಗಲಿಲ್ಲ ಚೂರು
ಹುಟ್ಟಿದ ಮನೆ,ಕೊಟ್ಟ ಮನೆ ಎರಡೂ ಒಂದೇ
ಬೆಟ್ಟ ಅಗೆದು ಇಲಿಯನ್ನು ಹಿಡಿದಳಮ್ಮ॥

ತವರಿಗೆ ಹಂಬಲಿಸಿ ತನು ಮೀಸಲಾಗಿಸಿ 
ತಾಯಿ ಸತ್ತ ಮೇಲೆ ತಾ ದೂರವಾದಳಮ್ಮ
ತಾ ಬೇಡ ತವರಿಗೆ, ಸಹಿ ಪಡೆದ ಮೇಲೆ
ತಮ್ಮಂದಿರ ನೆನೆದು ದೂರಾದಳಮ್ಮ॥

ಮನೆ ಕಟ್ಟಿದ ಮಕ್ಕಳು ಮನಕೊಟ್ಟರೇನು
ಹಣವಿಟ್ಟು ಫಲವೇನು ಗುಣವರಳಲಿಲ್ಲ
ದನಿವರಿಯದ ದುಡಿಮೆ ಕೈಕೊಟ್ಟರೂ
ಕೊನೆಯವರೆಗೂ ಮನತುಂಬಿ ಹರಿಸಿದಳಮ್ಮ॥




 




Friday, November 14, 2025

ಸಾಲು ಮರದ ತಿಮ್ಮಕ್ಕ

ಸಾಲು ಮರದ ತಿಮ್ಮಕ್ಕ

ನೂರು ಬೋಧಕರನು ಮೀರಿ ಬೆಳೆದ
ನಾರಿ ಇವಳು ದೇವರಿಗಿಂತ ಮಿಗಿಲು ನಮಗೆ
ಮರವ ಬೆಳೆದು ಜಗದೊಳಾದಳಜರಾಮರ॥

ಅಕ್ಷರವನರಿತು ಬಿಕ್ಷುಕರಂತೆ ಬೇಡುವ
ಸಾಕ್ಷರರು ಬಲ್ಲೆವೇನಿವಳ ಕಾರ್ಯದುತ್ತರ
ವೃಕ್ಷ ಮಾತೆಯ ದಕ್ಷ ನಡೆಯು ಸಾಗಿದೆ ಅನುದಿನ॥

ಸಾಲು ಮರದ ತಿಮ್ಮಕ್ಕ ಇವಳೇ ಜಗದಕ್ಕರ
ಸಾವಿರ ನೋವು ಹಾವಾಗಿ ಹರಿದರೂ
ಹಾಲೆರೆದು ಬೆಳೆದು ಬೀಗಿದಳಾಲದಮರ॥

ಒಂದೆ, ಎರಡೆ ನೆಟ್ಟಳೆಂಟು ಸಾವಿರ
ಬಂದು ನಿಂತವು ಮಕ್ಕಳೆಲ್ಲ ಹರಹರ
ದುಡಿದು ಸಾಗುವ ಶ್ರಮಿಕರಿಗೆಲ್ಲ ಬೃಂದಾವನ 

ಮಾತೆಯ ಮಡಿಲು ಮಕ್ಕಳುಸಿರು 
ಜಗದ ತುಂಬಾ ಹಸಿರು ಸಾಲು ಸಾಲು
ಕೊಸರಿ ಹೋಗುವ ನಿನ್ನುಸಿರು, ಮರೆಯಲಾಗದ ಹಸಿರು, ಮರೆಯಲಾಗದ ಹಸಿರು.॥

Friday, September 26, 2025

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉದ್ದೇಶ ಇಡೇರಲಾರದು.ಶಿಕ್ಷಣವೆಂದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ಇಲ್ಲವೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಕ್ರಿಯೆಯಲ್ಲ ಹಾಗೆ ಕಲಿತ ಶಿಕ್ಷಣದ ವಿಷಯಗಳು ಪರೀಕ್ಷೆಯ ದಿನಗಳವರೆಗೆ ಸಾಗಿ ಬರಬಹುದೇನೋ ಇಲ್ಲವೆ ತದನಂತರ ಅವು ಮರೆಯಾಗಲೂಹುದು. ಅಂದರೆ ಪ್ರಶ್ನಿಸದೆ ಕಲಿಕೆ ಅಪೂರ್ಣ ಎಂದಾಯಿತು. ಹಾಗಾದರೆ ಆ ಪ್ರಶ್ನಿಸುವ ಕಾರ್ಯ ಎಲ್ಲಿಂದ ಪ್ರಾರಂಭವಾಗಬೇಕು, ಯಾರಿಂದ ಮೊದಲು ಪ್ರಾರಂಭವಾಗಬೇಕು? ಎನ್ನುವುದರ ಮೇಲೆ ಕಲಿಕೆಯ ತೀವ್ರತೆಯು ವ್ಯತ್ಯಾಸವಾಗುತ್ತ ಸಾಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ತಮ್ಮ ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಬೇಗನೆ ಹೇಳಿಕೊಡುತ್ತಿರಲಿಲ್ಲ ಬದಲಾಗಿ ವಿದ್ಯೆಯ ಹಸಿವುಂಟಾಗುವಂತೆ ಮಾಡುತ್ತಿದ್ದರು ತದನಂತರದ ದಿನಗಳಲ್ಲಿ ಅನುಭವಗಳನ್ನು ಧಾರೆ ಎರೆಯುತ್ತಿದ್ದರು ಹಾಗೆ ಕಲಿತ ಜ್ಞಾನ ತಮ್ಮ ಜೀವನದ ಕೊನೆಯವರೆಗೂ ಹಿಂಬಾಲಿಸುತ್ತಿತ್ತು ಮತ್ತು ಗಟ್ಟಿಗೊಂಡಿರುತ್ತಿತ್ತು ಅಷ್ಟೆ ಏಕೆ ನಾಲ್ಕೈದು ದಶಕಗಳ ಹಿಂದಿನ ಹಿರಿಯರನ್ನು ನೀವು ಸೂಕ್ಷ್ಮ ವಾಗಿ ಗಮನಿಸಿರಿ ತಾವು ಕಲಿತ ಕವನ, ಕಥನ, ಕಾದಂಬರಿ ಲೆಕ್ಕ ಗಳನ್ನು ನೀರು ಕುಡಿದಷ್ಟೆ ಸಲೀಸಾಗಿ ಹೇಳುವುದನ್ನು ಕೇಳಿದ್ದೇವೆ. ಅದು ಹೇಗೆ ಸಾಧ್ಯ ! ಅವರೆಲ್ಲ ಹಸಿವಾಗಿ ಉಂಡವರು, ಅಂದರೆ ಕೇಳಿ ಪಡೆದವರು.ಹೀಗಾಗಿ ಅವರು ಕಡಿಮೆ ಇಯತ್ತೆಗಳನ್ನು ಕಲಿತಿದ್ದರೂ ಅದನ್ನು ಇಂದು ಪರಿಪೂರ್ಣವಾಗಿ ಹೊರಹಾಕುತ್ತಿದ್ದಾರೆ.ಈಗ ಅವರ ನಿರೀಕ್ಷೆ ಏನೆಂದರೆ ತಾವು ಕಡಿಮೆ ಕಲಿತವರಾದರೂ ಇಂದಿನ ಹೆಚ್ಚಿನ ವ್ಯಾಸಂಗ  ಮಾಡಿದ  ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆ ಮಾಡುತ್ತಿದ್ದಾರೆ ಮತ್ತು ಗುಣಮಟ್ಟ ಕುಸಿದಿದೆ ಎಂದು ಗೊಣಗುಟ್ಟುವುದನ್ನು ಕೇಳಿದ್ದೇವೆ. ಕೆಲವೊಂದು ಅಧ್ಯಾಪಕರು ಹದಿನೈದು ನಿಮಿಷ ಪಾಠ ಮಾಡಿ ಮೂವತ್ತು ನಿಮಿಷ ಬರೆಯಿಸುವುದನ್ನು ರೂಢಿಸಿಕೊಂಡವರಿರಬಹುದೇನೊ ಬಹುಶಃ ಅದು ಹೆಚ್ಚಿನ ಅಂಕಗಳಿಕೆಗೆ ಇರಬಹುದೇನೊ ಅಥವಾ ಪಾಸಿಂಗ್ ಪ್ರತಿಶತ ಹೆಚ್ಚಿಸಲು ಕಂಡುಕೊಂಡರೋ ಅದು ಅವರು ಬೋಧಿಸುವ ಬೋಧನಾ ಪದ್ಧತಿಗೆ ಬಿಟ್ಟ ವಿಷಯ.ಆದರೆ ಇಂದು ನಾವು ಪರಿಪೂರ್ಣ ಕಲಿಕೆಯನ್ನು ಮತ್ತೆ ಮಾಡಲು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾಗಿದೆ. ನಾನು ಈಗ್ಗೆ ಮೂವತ್ತು ವರ್ಷಗಳ ಹಿಂದೆ ಬಿ ಇಡಿ ಮಾಡುವಾಗ ಹರ್ಬರ್ಟನ ಪಂಚ ಸೋಪಾನ ಓದಿದ್ದೆ  ಅದರಲ್ಲಿ ಮೊದಲು ಬರುವ ಸೋಪಾನವೇ ಪೀಠಿಕೆ,  ಇದರ  ಉದ್ದೇಶ, ಉದ್ದೇಶ ಕಥನಕ್ಕೆ ವಿದ್ಯಾರ್ಥಿಗಳನ್ನು ತರುವುದು ನಂತರದ ಕಾಲಘಟ್ಟದಲ್ಲಿ ಅದು ಕಲಿಕಾಪೂರ್ವ ಚಟುವಟಿಕೆಯಾಯಿತು, ಇದರ ಉದ್ದೇಶವೂ ಉದ್ದೇಶ ಕಥನಕ್ಕೆ ಬರುವುದು, ಉದ್ದೇಶ ಕಥನದ ಯಶಸ್ಸು ಮಾತ್ರ ಮಗುವಿನ ಪ್ರಶ್ನಿಸುವ ಸಾಮರ್ಥ್ಯ ವನ್ನೆ ಅವಲಂಬಿಸಿದೆ.ಪ್ರಶ್ನೆಗಳಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನಾನು ಇಲ್ಲಿ ವ್ಯಕ್ತಪಡಿಸಲಾರೆ ಆ ಪ್ರಶ್ನೆಯ ವಿಧಗಳನ್ನು ಕಲಿತವರೆ ಶಿಕ್ಷಕರಾಗಿದ್ದರೆ ಆ ಮಾತು ಬೇರೆ. ಈಗ ನಮ್ಮ ಮುಂದಿರುವ ಬಹುದೊಡ್ಡ ಅವಶ್ಯಕತೆ, ಮಕ್ಕಳಲ್ಲಿ ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡುವುದು. ಒಂದು ಮಾತಿದೆ "ಪ್ರಶ್ನಿಸುವವನು ಕ್ಷಣ ಕಾಲ ದಡ್ಡನಾಗಿರುವನು ಪ್ರಶ್ನಿಸದೆ ಇರುವವನು ಸದಾ ಕಾಲ ದಡ್ಡ ನಾಗಿಯೇ ಉಳಿಯುವನು" ಎಂದು. ಪ್ರಶ್ನಿಸುವ ವಾತಾವರಣ ಎಂದರೆ ಅದೊಂದು  ಮನಸ್ಥಿತಿ ಮತ್ತು ಭವಿಷ್ಯ ನಿರ್ಮಾಣದ ಕೇಂದ್ರ ಅಲ್ಲಿರುವವರು ನಾವು ಹೇಳುವುದನ್ನು ಮಾತ್ರ ಕೇಳಲು ಕುಳಿತ ಸೋತೃಗಳಲ್ಲ ಹಾಗಾಗಿಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ನೇಮಿಸಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಮಾತ್ರ ಹೇಳಿ ಕೊಡುತ್ತೇನೆ" ಎಂದು. ಮುಂದುವರಿದು... ಮಕ್ಕಳಲ್ಲಿ ಈಗಾಲೆ ಪ್ರತಿಭೆಯು ಅಂತರ್ಗತ ವಾಗಿದೆ ಅದನ್ನು ಹೊರಗೆ ತರುವವನೆ ಶಿಕ್ಷಕ ಎಂದದ್ದು. ಹಾಗೆಯೇ ಪ್ರಶ್ನಿಸಲು ಬಾರದವನು ಶಿಕ್ಷಕನಾಗಲಾರ. ಪ್ರಶ್ನಿಸುವುದು ಒಂದು ಕಲೆ ಅದಿಲ್ಲದೆ ಉತ್ತಮ ಶಿಕ್ಷಕನಾಗಲಾರ .ಸತತ ಅಭ್ಯಾಸ ಒಬ್ಬ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿತ್ವ ವುಳ್ಳ ವ್ಯಕ್ತಿಯನ್ನಾಗಿ ಮಾಡುತ್ತದೆ.ಅಂತಹ ಗುರು ವರ್ಗ ಕೋಣೆಯನ್ನು ಸ್ವರ್ಗ ವನ್ನಾಗಿ ಮಾಡಬಲ್ಲ. ಪ್ರಶ್ನೆಗಳಿಲ್ಲದ ಕೋಣೆ ಅದು ಕೊಳೆತ ಬಾಳೆಹಣ್ಣಿನ ಗೊನೆ. " ಪ್ರಶ್ನೆಗಳೆ ಉತ್ತಮ ಶಿಕ್ಷಕನ ಜೀವಾಳ"

Tuesday, August 19, 2025

ಹಾಲಹಂಡೆ










ಬಂಡೆಗಳ ನಾಡಲ್ಲಿ ಬೆಳೆದು
ನಿಂತಿಹಳು ಹಾನಾಪೂರದ ಹಾಲಹಂಡೆ 
ಕಂಡು ಸಂತಸ ಪಡು ನೀ ಮಳೆಗಾಲದಂದು
ಫೀ ಇಲ್ಲ, ಪೇ ಮಾಡಬೇಕಿಲ್ಲ ಪಳಾರದ ಹಂಗಿಲ್ಲ 
ನಿಷ್ಕಲ್ಮಷ  ಮನಸ್ಸೆ ನಿನ್ನೂಲುವಿನಾ ಪೂಜೆ ಇವಳಿಗೆ ॥

ನಿಜ ಭಾವದಾಲಪವೆ ಭಜನೆ ಆ ಬಯಲಿಗೆ !
ತಂದು ಸುರಿಯಿರಿ ನಿಮ್ಮ ಗೊಜಲು ಗೊಂದಲ
ತಿಂದು ಜೀರ್ಣೀಸುವ ಶಕ್ತಿ ಯುಂಟು 
ಈ ಹಸಿರು ಹೊದ್ದ ಹೊಂಗೆ ಮರದ ಬಾಲೆಗೆ ! 

ಮೂವತ್ತು ಅಡಿಗಳ ಮೇಲಿನಿಂದಿವಳ ನರ್ತನ 
ಜುಳು ಜುಳು ನಾದವೆ ಇವಳ ಕೀರ್ತನೆ.
ಅಪ್ಪಳಿಸಿ ಹಾರುವ ಹನಿಗಳೆ 
ಮಂತ್ರಾಕ್ಷತೆ ಈ ಮದುವನಗಿತ್ತಿಗೆ !

ಅಂದು ದನಮೇಯಿಸಲೋದ ನನ್ನಕ್ಕತಂಗಿ
ಮೈಮರೆತು ಮೆಟ್ಟಿನಿಂತರು ಪಡುವನ ದಿಕ್ಕಿಗೆ 
ಹೊತ್ತು ಜಾರಿ ಕತ್ತಲಾವರಿಸಿ 
ಚಿತ್ತಕಳೆದುಕೊಂಡರಲ್ಲಿ ।

ಮಾಹಾಮಳೆಯು ಬೆಂಬತ್ತಿ 
ಬಂಡೆಗಲ್ಲಿಗೆ ಹೆದರಿ 
ಹಾವಾಗಿ ಹರಿದಳು ಮಾಯಾವಿ 
ಈ ವೈಯಾರಗಿತ್ತಿ ।
ಪಡಿಯ ನಡು ನಡುವೆ ನಡಿಗೆ ರೌದ್ರಾವತಾರ।
ಹಿಡಿದು ನೂಕಲು ಸಜ್ಜಾದಳು ಯಮರೂಪಿ॥

ಮೇಯಿಸಿದ ರಾಸು ಮನೆತಲುಪಿದಾಗ 
ಮನವೆಲ್ಲ ಗಲಿಬಿಲಿ, ಮನೆಯ ಕರೆಯೇ 
ಮರಣ ಮೃದಂಗದ ಬಲೆ !
ದಾಟಲೆಲ್ಲಿದೆ ಕಾಲಿನಲ್ಲಿ ಶಕ್ತಿ ! 
ಮೆಲ್ಲ ಮೆಲ್ಲನೆ ಒಂದಾಗಿ
ಓಡಿದರು ..ಓಡಿದರು.. ನಾವು ತಲುಪದ
ನಕ್ಷತ್ರ ವಾವಾಗುವ ಅನಂತ ದಾರಿಗೆ.॥













Monday, August 11, 2025

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, 

     ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರೆ ಹಾಗೂ ಮಾದ್ಯಮ ಸ್ನೇಹಿತರೆ
           ಇಂದು ಅಗಸ್ಟ 15, ನಾವೆಲ್ಲ 79 ನೇ ಸ್ವಾತಂತ್ರ್ಯೋತ್ಸವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತ್ತಿದ್ದೇವೆ ಈ ಸಡಗರ ಮತ್ತು ಸಂಭ್ರಮವು ಹಾಗೆಯೆ ಬಂದದ್ದಲ್ಲ  ಸಾವಿರಾರು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳ ಫಲ.1947 ರ ಕ್ಕಿಂತ ಪೂರ್ವ ದಲ್ಲಿ  ಬ್ರಿಟಿಷರು ನಮ್ಮನ್ನಾಳುತ್ತಿದ್ದರು ನಾವೆಲ್ಲ ಗುಲಾಮರಾಗಿದ್ದೆವು. ಭಗತ ಸಿಂಗ , ಚಂದ್ರಶೇಖರ ಅಜಾದ, ಖುದೀರಾಮ ಬೋಸ್, ಉದಯ  ಸಿಂಗ್ ರಂತಹ ಕ್ರಾಂತಿಕಾರಿಗಳು.... ಗೋಪಾಲ ಕೃಷ್ಣ ಘೋಖಲೆ, ಬಾಲಗಂಗಾಧರ ತಿಲಕ, ಸುಭಾಸ್ ಚಂದ್ರ ಬೋಸ್ ಮಹಾತ್ಮಾ ಗಾಂಧೀಜಿಯವರಂತ ರಾಷ್ಟ್ರ ಭಕ್ತ ನಾಯಕರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಗಲು ದಾರಿಯಾಯಿತು, ಆ ಕಾರಣಕ್ಕಾಗಿ  ಅಂತಹ ನಾಯಕರನ್ನು  ಇಂದು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಇಂದು ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಅಂದು ಹಸಿವಿನಿಂದ ಹಡಗಿಗಾಗಿ ಹಪಿಹಪಿಸುತ್ತಿದ್ದ ನಾವು ಹಸಿರು ಕ್ರಾಂತಿಯನ್ನು ಮಾಡಿ ವಿದೇಶಗಳಿಗೆ ಆಹಾರ ರಫ್ತು ಮಾಡುವ ದೇಶವಾಗಿದ್ದೇವೆ.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳ ರಾಷ್ಟ್ರಗಳಿಗೆ ಸಮವಾಗಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಚಂದ್ರನ ಮೇಲೆ ಉಪಗ್ರಹ ಕಳುಹಿಸಿದ್ದೇವೆ, ವಿದೇಶಗಳು ಕ್ರಯೋಜನಿಕ್ ತಂತ್ರಜ್ಞಾನ ನೀಡಲು ನಿರಾಕರಿಸಿದರೂ ಸ್ವದೇಶಿ ಕ್ರಯೋಜನಿಕ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಣು ಶಕ್ತಿ ಮತ್ತು ಅಂತರಿಕ್ಷ ಯಾತ್ರೆ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿದ್ದೇವೆ.ವೈರಿ ರಾಷ್ಟ್ರ ಗಳು ಬಂದು ವೈದ್ಯಕೀಯ ಸೌಲಭ್ಯ ಪಡೆದು ಹೋಗಬಹುದಾದ ವೈದ್ಯಕೀಯ ಸೌಲಭ್ಯಗಳು ನಮ್ಮಲ್ಲಿವೆ . ಪಹಲ್ಗಾಮನಲ್ಲಿ ಭಯೋತ್ಪಾದಕರು ನೀಡಿದ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ್ದೇವೆ, ಇದು ನಮ್ಮ ಹೆಮ್ಮೆಯ ಸಂಗತಿಯಾದರೂ ಇನ್ನೂ ನಮ್ಮ ದೇಶವನ್ನು ಕೆಲವೊಂದಷ್ಟು ಸಮಸ್ಯೆಗಳು  ಕಾಡುತ್ತಿವೆ. ನಿರುದ್ಯೋಗ ಸಮಸ್ಯೆಯಿರಬಹುದು,ಜಾತೀಯತೆ,ಬಡತನ,ಪ್ರಾದೇಶಿಕತೆ, ಭಯೋತ್ಪಾದಕತೆ ಮುಂತಾದವು. ಇವುಗಳನ್ನು ಬುಡ ಸಮೇತ ಕೀಳಲು ನಾವೆಲ್ಲ ಸಿದ್ಧರಾಗಬೇಕಾಗಿದೆ ...ಈ ದೇಶ ನನಗೇನೂ ನೀಡಿದೆ ಎಂದು ಪ್ರಶ್ನೆ ಹಾಕಿಕೊಳ್ಳದೆ ದೇಶಕ್ಕಾಗಿ ನಾನು ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ,  ದೇಶಕ್ಕಾಗಿ ದುಡಿಯುವುದೆಂದರೆ ಗಡಿಯಲ್ಲಿ ಹೋಗಿ ಯುದ್ದ ವನ್ನೆ ಮಾಡಬೇಕೆಂದೇನೂ ಇಲ್ಲ ಪ್ರತಿಯಬ್ಬರೂ ನಮ್ಮ ನಮ್ಮ ಕರ್ತವ್ಯ ವನ್ನು ನಿಷ್ಠೆಯಿಂದ, ಬದ್ಧತೆಯಿಂದ, ಸಮರ್ಪಣಾ ಮನೋಭಾವದಿಂದ ಮಾಡಿದರೆ ಅದೇ ರಾಷ್ಟ್ರ ಕ್ಕೆ ನಾವು ಮಾಡಬಹುದಾದ ದೊಡ್ಡ ಸೇವೆ ಅದನ್ನು ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕಾರ್ಯ ವನ್ನು ಮಾಡಿ ದೇಶದ ಅಭಿವೃದ್ಧಿಗೆ ನಮ್ಮ ಪಾಲನ್ನು ಅರ್ಪಿಸೋಣ. 
         ಜೈ ಹಿಂದ್ ,ಜೈ ಕರ್ನಾಟಕ 

Wednesday, August 6, 2025

ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ

ಅಂಕಗಳ ವೈಭವೀಕರಣಕಿರಲಿ ಅಂಕುಶ
ಅತಿಯಾದರದು ಮಗುವಿನ ಶಿಕ್ಷಣದ ಪಾಶ
ಮಿತಿ ಇರಲಿ, ಹಿತವಾಗಿದ್ದರದು ಅಳತೆಯ ಕೋಲು
ಸತತಪ್ರಯತ್ನವಿಲ್ಲದಿದ್ದರೆ ಪರಿಪೂರ್ಣತೆಗೆ ಸೋಲು ।।

ಅಂಕಗಳೆ ಅಂತಿಮವಲ್ಲ ಆದಿಯೂ ಅಲ್ಲ
ಸಾಧನೆಗದು ಊರುಗೋಲು ಮಾತ್ರ 
ಅದರಾಚೆಗೂ ಒಂದು ಬಾಳಿದೆ, ಬದುಕಿದೆ
ಬರದಿದ್ದರೆ ಏನ್ ? ಬೆದರುವುದು ಸಾಕು ।

ಪಠ್ಯ ದೊಂದಿಗೆ ಪುಟ್ಟದೊಂದು ಅವಕಾಶ
ಕಟ್ಟಿಕೊಳ್ಳಲು ಎಣಿಸಬೇಡ ಮೀನಾ ಮೇಷ 
ಪಟ್ಟಿಯೊಂದಿಗೆ ಬಂದಿದೆ ಮತ್ತೊಂದು ವರುಷ
ಪಠ್ಯೇತರ ಚಟುವಟಿಕೆಯಾಗಲಿ ಈ ವರುಷ ಹರುಷ

ಇಂಪಾಗಿ ಹಾಡು ತಂಪಾಗುವುದು ಜಗವೆಲ್ಲ
ಬಿಡಿಸಿ ಚಿತ್ರ ,ಮಾಡು ನೃತ್ಯ ಗಳಿಸುವೆ ಸಮಚಿತ್ತ
ಕಡೆಗಾಣಿಸದಿರು ಬಿಡುವು,  ಅಡು ನೀ ಆಟ
ಬಿಡದೆ ನಡೆಯುವುದು ದೇಹವೆಂಬ ರಥದ ಓಟ||

ಪ್ರಬಂಧ ರಸಪ್ರಶ್ನೆಯ, ಬೆಳೆಸು ಸಂಬಂಧ 
ಆಲಸ್ಯ ವೆಂಬುದು ದೇಹಕ್ಕಂಟಿದ ತುಕ್ಕು
ಮಿಕ್ಕಿ ನಡೆದರೆ ನೀನಾಗುವೆ ಚೊಕ್ಕ ಚಿನ್ನ
ಹೆಕ್ಕಿ ತೆಗೆಯಲಿದು ತಕ್ಕ ಸಮಯದ ಬಂಧನ॥

ವ್ಯವಸ್ಥೆಯೆಂಬದು ಚದುರಂಗದಾಟ
ನಾವದರ ಪದಾತಿ ದಳ, ನಡೆಸುವವನ ಸಾಮರ್ಥ್ಯ
ನಡೆಯುವವನ ಅವದಾನವಿಲ್ಲದಿದ್ದರೆ ನಡೆ ವ್ಯರ್ಥ 
ಕಡೆಗಣಿಸಿ ಬಿಡಬೇಡ, ನಡೆ ನೀನಾಗಹುದು ಮಂತ್ರಿ ॥




Tuesday, August 5, 2025

ಹರ್ಷ ವರ್ಧನ

ಮೂಲಪುರುಷ : ಪುಷ್ಯ ಭೂತಿ 
ಪ್ರಭಾಕರ ವರ್ಧನ. ಹೆಂಡತಿ ಯಶೋಮತಿ
          ..... ಮಕ್ಕಳು....
1 ರಾಜವರ್ಧನ.-2 ಹರ್ಷವರ್ಧನ -  3 ರಾಜಶ್ರೀ
      ¥               (ಶೀಲಾದಿತ್ಯ)  ( ಗೃಹವರ್ಮನ ಶಹೆಂಡತಿ)
                         ಥಾನೇಶ್ವರ.            ಕನೌಜ 
1 ಗೃಹವರ್ಮನು ಗೌಡದೇಶದ ಶಶಾಂಕನಿಂದ ಹತ್ಯೆಯಾದ
2 ರಕ್ಷಣೆಗೆ ಹೋದ ರಾಜವರ್ಧನನೂ ಕೂಡಾ ಹತ್ಯೆಯಾದ
ಪರಿಣಾಮವಾಗಿ
3 ಸಾ ಶ.606 ರಲ್ಲಿ  ಹರ್ಷವರ್ಧನ ಅಧಿಕಾರಕ್ಕೆ ಬಂದ
ಅವನು ಎದುರಿಸಿದ ಸವಾಲುಗಳು.
1 ರಾಜಶ್ರೀ ಬಿಡುಗಡೆ
2 ಶಶಾಂಕನ ಮೇಲೆ ಸೇಡು ತೀರಿಸಿಕೊಳ್ಳುವುದು.

1 ಕಾಮರೂಪದ ಬಾಸ್ಕರ ವರ್ಮನ ಜೊತೆಗೂಡಿ ಗಾವುಡ ದೇಶದ ಶಶಾಂಕ ನನ್ನು ಸೋಲಿಸಿ ಸೇಡು ತೀರಿಸಿಕೊಂಡ.
ಕಷ್ಟ ಪಟ್ಟು ತಂಗಿ ರಾಜಶ್ರೀಯನ್ನು ಹುಡುಕಿ ರಕ್ಷಣೆ ಮಾಡಿದ ಮತ್ತು ಕನೌಜ್ ನ್ನು ತನ್ನ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡ. 
2 ಮಾಳ್ವ ದೇಶದ ದೇವಗುಪ್ತನನ್ನು ಸೋಲಿಸಿ ರಾಜ್ಯ ವನ್ನು ಸಾಮ್ರಾಜ್ಯ ದಲ್ಲಿ ಸೇರಿಸಿಕೊಂಡ.
3 ಸಾ.ಶ 612 ಪಂಜಾಬನ ಪಂಚ ಸಿಂಧೂ ಮೇಲೆ ಅಧಿಪತ್ಯ ಸಾಧಿಸಿದ.
4 ಕನೌಜ,ಬಿಹಾರ  ಓರಿಸ್ಸಾ ಗೆದ್ದ.
5 ವಲ್ಲಭಿಯ ಧೃವಸೇನನ್ನು ಸೋಲಿಸಿ ಮಗಳನ್ನು ನೀಡಿದ.
6 ಗಾವುಡ ದೇಶದ ಶಶಾಂಕ ನ ಮರಣದ ನಂತರ ಒಡಿಶಾ,ಮಗದ,ಒಡಿಶಾದ ಕೊಂಗಂಡಗಳು ಇವನ ಅಧೀನಕ್ಕೆ ಬಂದವು.
7 ನೇಪಾಳದ ದೊರೆಯನ್ನು ಸೋಲಿಸಿ ಕಪ್ಪು ಕಾಣಿಕೆ ಪಡೆದ.
8 ಸಾಧನೆಯ ಪ್ರತಿಕವಾಗಿ ಉತ್ತರಾ ಪಥೇಶ್ವರನೆಂಬ ಬಿರುದು ಪಡೆದ.
9 ಇಮ್ಮಡಿ ಪುಲಿಕೇಶಯೊಂದಿಗೆ ಕಾಳಗ : ಸಾ ಶ.634ರಲ್ಲಿ
 ನರ್ಮದಾ ಕಾಳಗದಲ್ಲಿ ಸೋತು ಒಪ್ಪಂದ ಮಾಡಿಕೊಂಡ 
 ಇವನ ಸಾಮ್ರಾಜ್ಯ ಉತ್ತರ ದಲ್ಲಿ ಕಾಶ್ಮೀರದಿಂದ ನರ್ಮದಾ ನದಿಯವರೆಗೂ ಪೂರ್ವ ದಲ್ಲಿ ಬಂಗಾಲ ಒರಿಸ್ಸಾದಿಂದ ಪಶ್ಚಿಮದಲ್ಲಿ ಪಂಜಾಬನ ವರೆಗೆ ವಿಸ್ತರಿಸಿತ್ತು.
10 ಧರ್ಮ:ಆರಂಭದಲ್ಲಿ ಶಿವನ ಆರಾಧಕನಾಗಿದ್ದು ನಂತರ ಬೌದ್ಧ ಧರ್ಮ ಸ್ವೀಕರಿಸಿದ, ಪ್ರಾಣಿಬಲಿ ನಿಷೇಧಿಸಿದ
11 ಸಾ ಶ.643 ರಲ್ಲಿ ಕನೌಜನಲ್ಲಿ ಧಾರ್ಮಿಕ ಮಹಾಸಭೆ ಮತ್ತು ಪ್ರಯಾಗದಲ್ಲಿ ಬೌದ್ಧ ಮಹಾಸಮ್ಮೇಳನ ಏರ್ಪಡಿಸಿದ





Sunday, July 27, 2025

ಬದುಕು ಬಂಗಾರ

ಬೆನ್ನು ಬಾಗಿ, ಕಣ್ಣು ಮಂಜಾದವು
ಅನ್ನಹುಡುಕಲು ಅನುದಿನವೂ ಪಯಣ 
ತನ್ನವರು ತಂದು ಹಾಕುವುದೇ 
ಪರಹಾರವೆನ್ನದೆ ತಾ ದುಡಿದುದೆ ಪರಮಾನ್ನ //

ಬಿಸಿ ರಕ್ತ ಬಸಿಯುವಾಗ ಹೊಸ ಹುರುಪು
ಕುಸಿಯಿಂದ ಹೊಸ ನಗುವಿನಾ ಸಂಸಾರ
ಬಿಸಿಲು ಬಾಗಿ ಮುಸ್ಸಂಜೆಯಾವರಿಸಿ
ಕಸುವು ಕತ್ತಲೆಯಾವರಿಸಿದರೆ ಹಸಿವಿಗೆಲ್ಲಿದೆ ಬರ//

ಕಾಸಿಗೂ ಕಾಲಿಗೂ ಚೌಕಾಸಿ 
ನಡೆದಷ್ಟು ಪಡೆಯಲು ನಾ ಮುಂದು ತಾ ಮುಂದು
ನಡೆಯಿದಿದ್ದರೆ ಪಡೆಯವುದೇನಿದೆ 
ಬದುಕೊಂದು ಕಡೆಗೆ ನರಕದ ಮನೆ //

ಕನಸುಗಳು ಬೆನ್ನೇರಿ ಕವನಗಳ ಕಟ್ಟಿ
ಎಲ್ಲೆಲ್ಲೋ ಕವನ ಸಂಕಲನಗಳೇ
ಮನಸ್ಸುಗಳು ಹದವರಿತು  ಮೌನದಾಲಾಪ
ಮನವೆಲ್ಲಾ ಕಟ್ಟಿದ ಗಾನಗಂಧರ್ವ ಲೋಕ//

ನಡೆದದ್ದು ಬಹುದೂರ ಮಾಡಬೇಕಿದೆ ಪೂರ್ಣ
ಹೆಡೆಯಲ್ಲಿ ತೂಗಾಡಿದೆ ಕೇಸರಿಯ ವರ್ಣ
ಪಡೆಯಲು ದುಡಿಯುವುದೊಂದೆ ಹಂಬಲ
ತಡೆಯಾಲಾರಿಲ್ಲ ಉಳಿದ ಜೀವನವೆ ಬೆಂಬಲ//





 


 




 




Monday, July 7, 2025

ಮೊಹರಂ

      ಹಬ್ಬಗಳ ಉದ್ದೇಶವೆ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು, ಬಂದು ಬಾಂಧವರು ಹತ್ತಿರ ಸೇರುವುದು, ಹಳಸಲು ಕಶ್ಮಲಗಳು ಹರಿದ ಹೋಗಿ ಹೊಸ ಉತ್ಸಾಹ ತುಂಬಿ ಬರುವುದಾಗಿದೆ. ಇಲ್ಲದಿದ್ದರೆ ಅದು ಹಬ್ಬ ಅಂತ ಅನ್ನಿಸಲಾರದು ಅದೂ ಜಾತಿ, ಧರ್ಮ ವನ್ನು ಮೀರಿದ ಮನಸ್ಸನ್ನು ಪುನಶ್ಚೇತನಗೊಳಿಸುವ ಸಂಜೀವಿನಿ.ಅದಕ್ಕಾಗಿ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಸಾಮಾಜಿಕ ಬಳುವಳಿ ಇದನ್ನು ಬಳಸಿಕೊಂಡ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ನಾಗರಿಕತೆ ಬೆಳೆದಂತೆ ಮನುಷ್ಯ ನ ನೆಮ್ಮದಿಯನ್ನು ಇಮ್ಮಡಿಗೊಳಿಸುವ ಭೌತಿಕ ಸಾಧನಗಳು ಸಾಕಷ್ಟು ಇವೆ.ಅವು ಏನೆ ಇರಲಿ ಅವು ವ್ಯವಹಾರಿಕ ಹಾದಿಯನ್ನು ಹಿಡಿದಿರುವುದನ್ನು ನಾವೆಲ್ಲ ಕಾಣುತ್ತೇವೆ ಅದರಾಚೆಯೂ ಕೂಡಾ ಹಳ್ಳಿಗಳಲ್ಲಿ ಧರ್ಮದ, ಜಾತಿಯ ಚೌಕಟ್ಟಿನ ಮೀರಿದ ಹಬ್ಬದ ಆಚರಣೆಯು ನನ್ನ ನ್ನು ಈ ನಾಲ್ಕು ಸಾಲುಗಳನ್ನು ಬರೆಯುವಂತೆ ಮಾಡಿದ್ದು ಸತ್ಯ. ನಾನು ಹುಟ್ಟಿದ ಊರು ಹಾನಾಪೂರ ಎಸ್ ಪಿ. ನನ್ನೂರಿನಲ್ಲಿ ಒಂದೆ ಒಂದು ಮುಸ್ಲಿಮ ಕುಟುಂಬವೂ ಇಲ್ಲ ಆದರೂ ಮುಸ್ಲಿಮರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮೊಹರಂ ಹಬ್ಬವನ್ನು ಊರಿನವರೆಲ್ಲ ಸೇರಿ ಆಚರಿಸುವ ರೀತಿಯು ಭಾವೈಕ್ಯಕ್ಕೆ ಹಿಡಿದ ಕನ್ನಡಿ ವಿವಿಧ ಜಾತಿಯ ಜನರು ವಾಸಿಸುವ ಈ ಊರಿನಲ್ಲಿರುವ ಹಬ್ಬ ಜ್ಯಾತಾತೀತ ಪದಕ್ಕೆ ಶೃಂಗಾರ. ಹಬ್ಬದ ಆಚರಣೆಯ ವಿಧಗಳು ಅವು ಏನೆ ಇರಲಿ ಬದುಕನ್ನು ಆಸ್ವಾದಿಸುವ ಅವರ ಪದ್ದತಿಯು ನಿಜಕ್ಕೂ ಅನುಕರಣೀಯ. ಹೆಜ್ಜೆಯ ಕುಣಿತಕ್ಕೆ ಅವರು ನೀಡಿದ ಆಧುನಿಕ ಸ್ಪರ್ಶ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು ಟ್ರ್ಯಾಕ್ಟರ್ ಗೆ  ಅಳವಡಿಸಿದ ಸ್ಪೀಕರ್ ಕೋಲಾಟದ ಕುಣಿತಕ್ಕೆ ತಾಳಹಾಕಿತು ಯುವಕರ ಸಿಳ್ಳೆಕೆಕೆಗಳು ಲೌಕಿಕ ಚಿಂತಕರ ಮೌನವನ್ನು ಮುರಿದು ಗಾನದಲ್ಲಿ ತೇಲಿಸಿದವು, ದುಡಿದು ಬಸವಳಿದವನಿಗೆ ಇದಕ್ಕಿಂತ ಟಾನಿಕ್ ಇನ್ನೂಂದು ಸಿಗಬಹುದೆ ?ಮೊಹರಂ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತಿದ್ದು, ಕ್ರಿ. ಶ 680ರಲ್ಲಿ ನಡೆದ ಕರ್ಬಲಾ ಕದನದಲ್ಲಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ರ ಸವಿನೆನಪಿಗಾಗಿ ಶೋಕದೊಂದಿಗೆ ಈ ದಿನವನ್ನು ಆಚರಿಸಲಾಗುವುದು. ಇದು ಇಸ್ಲಾಮಿಕ್‌ ಕ್ಯಾಲೆಂಡರ್‌ನಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದ ಹಬ್ಬವಾದರೂ ಆ ಯಾವ ಐತಿಹಾಸಿಕ ಮಾಹಿತಿ ಅರಿವು ಸಂಪೂರ್ಣ ಅವರಿಗೆ 
ಇಲ್ಲದಿದ್ದರೂ ನಂಬುಗೆ ಹಾಗೂ ಸಂಪ್ರದಾಯದ ಬೆಳಕಿನಲ್ಲಿ ಅವರು ಕಾಣುವ ಸಂತೋಷ ನಿಜವಾಗಿಯೂ ಮೆಚ್ಚಬೇಕಾದದ್ದೆ 

Thursday, July 3, 2025

ನೋಟ ಬುಕ್ ವಿತರಣೆ




ಹಣ ಬಂದಾಗ ಗುಣ ಕಳದುಕೊಂಡು 
ಹಾದಿ ತಪ್ಪಿದವರು ಬಾಳ ಜನ
ಗಳಿಸಿದಾಗ ಬಳಸಲು ಶಾಲೆಗೆ 
ಬಂದವರು ಬಹಳ ಕಡಿಮೆ ಜನ

ಬಡವರ ಮಕ್ಕಳಿಗೆ ಬಾಗ್ಯ ನೀಡಲು
ಗುಳೇಗುಡ್ಡದಾಗ ಕಡಿಮೆ ಏನು ಜನ
ಕಳಸಾ, ಹಿಡಿದು ಕರೆದುಕೊಂಡ ಬಂದಾರ 
ವಿಠ್ಠಲ ಪ್ರಾಚಾರ್ಯ ರಾಗಿ ಈ ದಿನ 

ಓದುವ ಮಕ್ಕಳಿಗೆ ನೋಟುಬುಕ್ ತಂದ
ಸವದತ್ತಿ ಯಲ್ಲಮ್ಮನ ಮಗ ಪರಸುರಾಮ
ಓದುವುದೊಂದೆ ಬಾಕಿ ಐತಿ ಮಕ್ಕಳ, 
ಜಾದೂ ಮಾಡಿದಂತಲ್ಲ ಸಾಧನ 

ನಾವೆಲ್ಲ ತೆಗೆದುಕೊಳ್ಳೋಣ ಪ್ರತಿಜ್ಞೆ  
ಮೊಬೈಲ್ ರೀಲ್ಸ್ ನೋಡೋದು ಬಿಡೋಣ
ಅದೆ ದಾನಿಗಳಗೆ ತುಂಬು ಹೃದಯದ ನಮನ 
ಸದಾ ಇರಲಿ ಅಭ್ಯಾಸದ ಕಡೆ ಗಮನ 




  

Saturday, June 28, 2025

ಕಾರ್ಗಿಲ್ ವೀರರ ಕವನ ಸ್ಫರ್ಧೆ

ಅನು ದಿನವು ಮಾತಾಡಿ ಅರಕ್ಷಣವೂ ಓದದೆ ಅದೆಂತು ಲಭಿಸಿವುದು ಜಾಣ್ಮೆ ಅದಕ್ಕೂ ಬೇಕು ತಾಳ್ಮೆ . ಬರೆಯುವುದು  ನನ್ನ ಹವ್ಯಾಸ ಬೆನ್ನು ಬೀಳುವುದಿಲ್ಲ ಬೆಕೆಂದು ಸಾಹಿತ್ಯದ ಪಟ್ಟ ಆದರೆ ಕೊಟ್ಟರೇನು ಮಾಡುವುದು ?  ಬರಹಗಾರನಿಗೆ ನೀಡುವಂತೆ ನನಗೂ ನೀಡಿದರೆ ಇ-ಪ್ರಮಾಣಪತ್ರದ ಹೂಗುಚ್ಚ 
ಬಿಟ್ಟು ಇರಲಾದೀತೆ.... ಹಂಚಿಕೊಳ್ಳುವ ತವಕ !.
ಅದು ಶಿಕ್ಷಕರ ಪರಿಷತ್, ಕಲಿಸುವ ಕರಗಳಿಗೆ 
ಕನ್ನಡ ಕಟ್ಟುವ ಕೆಲಸ, ಮೇಲೆ ರಾಷ್ಟ್ರದ ಭಕ್ತಿಯ ಪ್ರೀತಿ . ಬರೆಯದೆ ಇರಲಾದೀತೆ ಚಿತ್ರ ಕವನ ಸ್ಪರ್ಧೆ ! 
ಬರೆದೆ ...ಕಾರ್ಗಿಲ್ ಕದನ ವೀರರ ಕ್ಷಾತ್ರ ತೇಜಸ್ಸು,
ಸ್ಥಾನ ಯಾವುದಾದರೇನು ? ನೂರಾರು ಕವನಗಳ ವೀರ ಸೈನಿಕರ ಗುಣಗಾಣ ಅದರಲ್ಲಿ ನನದೊಂದು ಅಳಿಲು ಸೇವೆ ಮೂರು ಹತ್ತುಗಳಲ್ಲಿ ಮುತ್ತಾಗಿ ಬಂದರೆ ಪ್ರೀತಿಯಿಂದ ಎತ್ತಿಕೊಳ್ಳದೆ ಇರಲಾದೀತೆ ...ಹೆತ್ತವರಿಗೆ ಹೆಗ್ಗಣವೂ ಮುದ್ದು ಮತ್ತೆ ಮತ್ತೆ ಬರೆಯಲು ಪ್ರೇರಿಪಿಸಿದ ಶಿಕ್ಷಕ ಸಂಘಟನೆಯ ಬಳಗಕ್ಕೆ ನೂರೊಂದು ನಮನಗಳು.

Sunday, June 1, 2025

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"


ಶಾಂತಿ ಮಂತ್ರ ಪಠಿಸುವ ಶಾಲೆಯ
ಕ್ರಾಂತಿಯ ಗೀತೆಯ ಹಾಡುವ ಕಲಿಗಳು
ಕೆದುಕದೆ ಕದನ ಮಾಡದ ಹುಲಿಗಳು
ಭಾರತದ ಯೋಧರು ಭಾಗ್ಯವಿದಾತರು॥

ಹೆತ್ತವರ ಮಮತೆ ಮನದಲ್ಲಿ ನೆಟ್ಟು
ಮಡದಿಯ ಪ್ರೀತಿಯ ಅದುಮಿಟ್ಟು
ಉತ್ತರದ ಹಿಮಶಿಖರ ಹತ್ತುವರು, 
ತಟ್ಟಿದರೆ ನೆತ್ತರಿನೋಕಳಿಯಾಡುವರು॥

ರಕ್ತ ಹೆಪ್ಪುಗಟ್ಟಿದರೂ ತಪ್ಪಿಸಿಕೊಳ್ಳದೆ
ಸೂಕ್ತ ಸಮಯಕೆ ಕಾಯುವವರು
ವೈರಿ ತಂತ್ರಕೆ ಪ್ರತಿ ತಂತ್ರ ಹೆಣೆಯುವರು
ಮಂತ್ರ ಒಂದೆ ನಾವು ಭಾರತೀಯರು॥

ಪಾಕ್ ಕುನ್ನಿಗಳ ಹೇತು ಒಂದೇ
ಕಾಶ್ಮೀರ ಕದಿಯಲು ಭಯೋತ್ಪಾದನೆ ಮುಂದೆ
ಕಾರ್ಗಿಲ್ ದ್ರಾಸ್ ಭೇಧಿಸ ಬಯಸಿದರು
ಧೀರ ಯೋಧರು ಗುನ್ನ ಇಟ್ಟರು ಅಂದು॥

ಜೈ ಜವಾನ ಜೈ ಕಿಸಾನ
ಬರಿ ಘೋಷಣೆಯಲ್ಲ ಭಾರತದುಸಿರು
ಯೋಧರ ಕಷ್ಟಕೆ ಹಿಂದುಸ್ತಾನ ಮುಂದು
ಗಡಿ ಕಾಯುವವರಿಗೆ ಗುಡಿ ಕಟ್ಟುವರಿಂದು ॥


Friday, May 30, 2025

ಗಂಜಿ ಕೆರೆ

ಗಂಜಿ ಕೆರೆಯ ದಂಡೆ

ನನ್ನ ಹೊಲದ ಜಲ 
ಇಲ್ಲಿ ಬಂದು ಸೇರುವದೆಂದರೆ ಏನು ?
ಕೇಳುವುದೇ ವಿಸ್ಮಯ
ಯಾವ ಮೂಲೆಯ ಜಾಗದಲ್ಲಿ 
ಹೇಗೆ ಅವಿತಿದೆ ಯಾರು ಬಲ್ಲರು? 
ಕಾಣದಿದ್ದರೂ ಒಂದೇ ಕಂಡರೂ ಒಂದೆ 
ಉಂಡು ಸಂತಸಪಡಬೇಕು ಕ್ಷಣ 
ನಾಗರಿಕತೆಯ ನೊಗ ಹೊತ್ತವರು 
ನಗದೆ ಇರುವರೆ ನಿನ್ನ ?
ನಿನ್ನ ದೆನ್ನುವುದೇನಿದೆ ಜಗದಲ್ಲಿ?
ಕುನ್ನಿ, ಮಹಾದೇವ ಕರುಣಿಸದ ಜಲ
ಭೂದೇವೆ ತರಿಸಿಕೊಂಡಳು ವರ
ಹಸಿರು ಸೀರೆಯನುಟ್ಟು ಹಣೆಗೆ ಹೂ ಬೆಟ್ಟು
ಮೇ ನಲ್ಲೆ ಸುರಿದ ಮುಂಗಾರಿನ ಮಳೆ 
ಹೆಂಗಾರ ವರ್ಣಿಸುವುದು
ಸಿಂಗರಿಸಿದ ಧರಣಿ,ವಧು ವರರಿಗೆ  
ಶಾಸಕ್ಕಿ ಹೊಯ್ದಾಂಗ
ಹೊಸಮಾಲಗಿತ್ತಿ ನಸುನಾಚಿ
ಕನಸುಗಳ ಬೆನ್ನೇರಿದಾಂಗ
ಬಿರಿದ ಕರಿ ಹೊಲಗದ್ದೆ
ಕಾಯ್ದು ಕಮ್ಮಾರನ ತಿದಿ ಗಾಳಿ
ಕಾಡ ಬಂದಿದೆ ಏನೋ ಕಾರ್ಮೋಡ 
ಬಿಳಿಯ ಕಲ್ಲುಗಳೊಳಗೂಡಿ
ಮೇಲೆ ಬೆಂಕಿಯ ಕಿಡಿ
ಕೆಳಗೆ ಬಂಗಾರದಂತಹ 
ಭಾಸ್ಕರನ ಕಿರಣ
ನಳ ನಳಿಸುವ ಗಿಡ ಮರ 
ನೋಡಲು ತೆರಿಗೆಯ ಹಾಕಿದರೆ 
ಏನು ಮಾಡುವುದು ?
ನನ್ನ ದೆನ್ನುವುದು ಏನಿಲ್ಲಾ
ಕಣ್ಣು ಹಾಯೀಸಿದ ಕಡೆ ಸ್ವರ್ಗದ ಬಿಡು
ಅಸ್ವಾದಿಸು ಮತ್ತೆ ಕಾಣಲು
ಮಹಾದೇವನ ಆಶೀರ್ವಾದ ಬೇಕು

Wednesday, April 30, 2025

ಬಸವ ಸ್ಮರಣೋತ್ಸವ

    
           
      ಬಸವ ಕೇಂದ್ರ ಗುಳೇದಗುಡ್ಡದ ವತಿಯಿಂದ ಬಸವ ಸ್ಮರಣೋತ್ಸವ 2025 ರಲ್ಲಿ ನನಗೂ ಅಭಿಪ್ರಾಯ  ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟು ನನ್ನನ್ನು ಶರಣರ ಕುಲಕ್ಕೆ ಸೇರಿಸಿದ ಬಸವ ಕೇಂದ್ರದ ಸಂಘಟಕರಿಗೆ ನಾನು ಚಿರಋಣಿ ಅಪಾರ ಪಾಂಡಿತ್ಯ ಹೊಂದಿದ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿದ್ದಲಿಂಗಪ್ಪ ಬರಗುಂಡಿ ಸರ್,ನಿವೃತ್ತ ಪ್ರಾಂಶುಪಾಲರಾದ ನೀಲಕಂಠ ಮಠ ಸರ್, ಬಸವ ಕೇಂದ್ರದ ಗೌರವಾಧ್ಯಕ್ಷರು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ.ಎಚ್ ಎಸ್ ಹುಳಿಪಲ್ಲೇದ ಸಾಹೇಬರು ಯಾವ ಮಾನದಂಡ ಇಟ್ಟುಕೊಂಡು ನನಗೆ ಅನುಭಾವದ ನುಡಿಗಳನ್ನಾಡಲು ಅವಕಾಶ ನೀಡಿದರೊ ನಾನರಿಯೇ ಅದರೆ ನಾನು ಮಾತ್ರ ಅನುಭಾವಿಗಳ ಸಾಮಿಪ್ಯಕ್ಕೆ ಬಂದು ಬಿದ್ದಿದ್ದಂತು ಸತ್ಯ. 
        " ಜಾತಿ ಸಂಕರವಾದ ಬಳಿಕ ಕುಲವನರಿಸುವರೆ ?" ಎಂದು ಪ್ರಶ್ನಿಸುವ ಮೂಲಕ.  ಬಸವೇಶ್ವರರು   ಕಾಯಕ ಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ಇದು ಭಾರತದ ಇತಿಹಾಸದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಲು ಸಹಕಾರಿಯಾಯಿತು. ಆ ಮೂಲಕ ಅಂದಿನ ದಿನಮಾನದಲ್ಲಿದ್ದ ರೈತರು,ಶೂದ್ರರು, ಪಂಚಮರು, ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ಮತ್ತು ಅವರಿಗೆ ಶಿಕ್ಷಣ ನೀಡಿ ಅವರ ಅನುಭವಗಳನ್ನು ಅನುಭವ ಮಂಟಪದಲ್ಲಿ ಮಂಡಿಸಲು ಅವಕಾಶ ಕಲ್ಪಿಸಿತು ಮತ್ತು ಆದು ಅಂದಿನ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು  ಚರ್ಚೆಯಾಗಲು ದಾರಿ ಮಾಡಿಕೊಟ್ಟಿತು.
           ಹನ್ನೆರಡನೆ ಶತಮಾನದ ಶರಣರು ಅಂದಿನ ಸಮಾಜದಲ್ಲಿ ಕಂಡು ಅನುಭವಿಸದ ವಜ್ರಗಳು ವಚನ ರೂಪದಲ್ಲಿ ಹೊರಬಂದು ಮುಂದಿನ ತಲೆಮಾರಿಗೆ ಅನುಭವದ ದಾರಿದೀಪಗಳಾದವು. ಶರಣರ ವಚನಗಳು ಸಂತೋಷದ ಬದುಕಿಗೆ ತಳಪಾಯವಾಗಬಲ್ಲವು. ಕಾರಣ ಇಷ್ಟೆ ಅವು ರಾಜರನ್ನು ಹೊಗಳಿ ಬರೆದ ಹೊತ್ತಿಗೆಗಳಲ್ಲ, ಸ್ವರ್ಗ ನರಕಗಳ ಬಗ್ಗೆ ಬರೆದ ಕಲ್ಪನಾ ಲೋಕದ ಆಲೋಚನೆಗಳೂ ಅಲ್ಲ  ಅವು ಕಾಯಕ ಯೋಗಿಗಳ ಅನುಭವಗಳ ಸಾಗರ "
       ಬಸವೇಶ್ವರರು ವೈದಿಕ ಶೈವ ಕುಟುಂಬದಲ್ಲಿ ಜನಿಸಿ ಅಲ್ಲಿ ನಡೆಯುವ ಲಿಂಗತಾರಮ್ಯದ ವಿರುದ್ದ ಬಂಡೆದ್ದು ಎಂಟನೆಯ ವಯಸ್ಸಿನಲ್ಲಿ ಮನೆಯಿಂದ ಹೊರಬಂದರು ಅಕ್ಕನಾಗಮ್ಮನ ಸಹಾಯದಿಂದ ಕೂಡಲಸಂಗಮದ ಲಕುಲೀಶ-ಪಾಶುಪಥ ಶೈವ ಕಲಿಕಾ ಕೇಂದ್ರದಲ್ಲಿ ಅಧ್ಯಯನ ಮಾಡಿ ಮೊದಲು ಮಂಗಳವೇಡಿ ನಂತರ ಕಲ್ಯಾಣದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದರು ಹನ್ನೊಂದುನೂರಾ ಐವತ್ನಾಲ್ಕರ ಸುಮಾರಿಗೆ ಕಲ್ಯಾಣಿ ಚಾಲುಕ್ಯರ ಮೂರನೇ ತೈಲಪನ ನಂತರ ಕಲ್ಯಾಣದಲ್ಲಿ ಕಲಚೂರಿ ಬಿಜ್ಜಳ ಅಧಿಕಾರಕ್ಕೆ ಬಂದಾಗ ಬಸವೇಶ್ವರರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾದರು ಈ ಅವಧಿಯಲ್ಲಿ ಅಂದಿನ ಸಮಾಜದಲ್ಲಿ ಬೇರೂರಿದ್ದ  ಅಂಧ ಶ್ರದ್ದೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ವಿಶೇಷವಾಗಿ ಜಾತೀಯತೆ ಮತ್ತು ಅಸ್ಪೃತೆ ವಿರುದ್ಧ ಹೋರಾಡಲು ಸಹಬೋಜನ ಮತ್ತು ಅಂತರ್ಜಾತೀಯ ವಿವಾಹ ಪ್ರೊತ್ಸಾಹಿಸಿದರು.ಸಮಗಾರ ನಾಗದೇವನಿಗೆ ಲಿಂಗ ದೀಕ್ಷೆ ನೀಡಿದಾಗ ಅವರು ಶರಣರಾದರು ಅವರ ಆತಿಥ್ಯ ಸ್ವೀಕರಿಸಿದರು.ಅದೆ ರೀತಿ ಹುಟ್ಟಿನಿಂದ ಬ್ರಾಹ್ಮಣ, ಸಂಸ್ಕಾರದಿಂದ ಶರಣನಾದ ಮದುವರಸನ ಮಗಳಿಗೂ ಹುಟ್ಟಿನಿಂದ ಸಮಗಾರನಾಗಿ ಸಂಸ್ಕಾರದಿಂದ ಶರಣನಾದ ಹರಳಯ್ಯನ ಮಗನಿಗೆ ಮದುವೆ ಮಾಡಿಸಿದರು ಇದು ಸಂಪ್ರದಾಯವಾದಿಗಳನ್ನು ತಿರುಗಿ ಬೀಳುವಂತೆ ಮಾಡಿತು. ಮುಂದೆ ಇದು ಕಲ್ಯಾಣದ ಕ್ರಾಂತಿಗೆ ಕಾರಣವಾಯಿತು.
            ಮಹಾವೀರರು ದೇವರನ್ನು ನಂಬಲಿಲ್ಲ,  ಬುದ್ಧ ದೇವರ ಬಗ್ಗೆ ಏನನ್ನು ಹೇಳಲಿಲ್ಲ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣ 
"ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ 
ಮರ ದೇವರು ದೇವರಲ್ಲ
ಪಂಚಲೋಹಗಳಿಂದ ಮಾಡಿದ ದೇವರು ದೇವರಲ್ಲ 
ಸೇತುಬಂಧ ರಾಮೇಶ್ವರ ಕಾಶಿ ,ಕೇದಾರ,ಗೋಕರ್ಣ ಗಳಲ್ಲಿರುವ ದೇವರು ದೇವರಲ್ಲ
ತನ್ನ ತಾನಾರೆಂದು ತಿಳಿದೊಡೆ ತಾನೆ ದೇವರು ನೋಡಾ ಕೊಡಲ ಸಂಗಮ"
 ಎನ್ನುವ ವಚನದ ಮೂಲಕ ದೇವರ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನ ನೀಡಿದರು.
 ಬ್ರಹ್ಮ ವಿಷ್ಣು ಮಹೇಶ್ವರರನ್ನು ಮೀರಿ ಸೃಷ್ಟಿಕರ್ತನಿದ್ದಾನೆ ಅವನು ನಿರಾಕಾರ ಅವನನ್ನು ಮಾನವ ಹಾಗೂ ಪ್ರಾಣಿಗಳ ರೂಪದಲ್ಲಿ ಪೂಜಿಸುವದು ಸಲ್ಲದು ಎನ್ನುತ್ತಾರೆ ಬಸವಣ್ಣ 
       ದೇವರ ಸಾಕಾರ ಕೃತಿಯೇ ಬ್ರಹ್ಮಾಂಡ ಇದು ಗೋಲಾಕಾರದಲ್ಲಿದೆ ಆದ್ದರಿಂದ ಲಿಂಗದೇವರನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟ ಲಿಂಗ ಪರಿಚಯಿಸಿದರು ಮತ್ತು ಶಿವಭಕ್ತಿಯ ನಿರಂತರ ಜ್ಞಾಪನೆಗೆ ಪ್ರತಿಯೊಬ್ಬ ವ್ಯಕ್ತಿಗೆ ಅವರ ಜನ್ಮ ವನ್ನು ಲೆಕ್ಕಿಸದೆ ಲಿಂಗ ಚಿತ್ರ ವಿರವ ಇಷ್ಟ ಲಿಂಗ ಹಾರ ಧರಿಸಲು ಸೂಚಿಸಿದರು.
.       ಬಸವೇಶ್ವರರು ಶಿವಪೂಜೆಗೆ ಅವಕಾಶ ನೀಡಿದರು ಶಿವನ ಆರಾಧನೆಯಲ್ಲಿ ಎರಡು ಭಾಗಗಳಿವೆ ಒಂದು ಅಂಗ ಇನ್ನೂಂದು ಲಿಂಗ ,ಅಂಗವು ಲಿಂಗದಲ್ಲಿ ಐಕ್ಯವಾಗುವುದೆ ಮೋಕ್ಷ. ಇಲ್ಲಿ  ಶಿವ ಶಕ್ತಿ ವಿಲೀನವೇ ಬಸವ ತತ್ವ ಕ್ಕೆ ಆಧಾರ ಪರಸ್ಪರ ವಿಲೀನವಿಲ್ಲದೆ ಪುರುಷ ಪ್ರಕೃತಿಯು ಅಪೂರ್ಣ ಇದನ್ನೇ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತ ಎಂದು ಕರೆಯುತ್ತಾರೆ. ಮೋಕ್ಷ ಸಾಧನೆಗೆ ಲಿಂಗ ಪೂಜೆಮಾಡಬೇಕು ಎಂದು ಹೇಳಿದರು
          ಶಿವನ ಮುಂದೆ ಎಲ್ಲರೂ ಸಮಾನರು, ವ್ಯಕ್ತಿಯೊಬ್ಬನ ಅಂತಸ್ತು ಆತನ ಯೋಗ್ಯ ತೆಯನ್ನು ಅವಲಂಬಿಸಿದೆಯೇ ಹೊರತು ಆತನ ಹುಟ್ಟನ್ನಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಡಾ.ಬಿ ಆರ್ ಅಂಬೇಡಕರರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ,ಬಂಧತ್ವವನ್ನು ನೀಡಿದರೆ ಬಸವಣ್ಣ ಅನುಭವ ಮಂಟಪದ ಮೂಲಕ ಇವೆಲ್ಲ ವುಗಳನ್ನು ನೀಡಿದರು ಹೀಗಾಗಿ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎಂದು ಕರೆಯಲಾಗಿದೆ.
          ಕಾಯಕವು ಭಕ್ತಿಯ ಇನ್ನೊಂದು ರೂಪ ಅದು ಮುಕ್ತಿಗೆ ದಾರಿತೋರುವುದು ಹಾಗಾಗಿಯೇ ಕಾಯಕವೇ ಕೈಲಾಸವೆಂದರು ಯಾವ ಕಾಯಕ ಮೇಲೂ ಅಲ್ಲ ಕನಿಷ್ಠ ವೂ ಅಲ್ಲ ಎನ್ನುತ್ತಾ ಶ್ರಮಗೌರದ ಪರಿಕಲ್ಪನೆಯನ್ನು ನೀಡಿದರು.ಹದಿನೆಂಟನೆ ಶತಮಾನದಲ್ಲಿ ಜಗತ್ತಿನ ಕಾರ್ಮಿಕರನ್ನು ಒಂದುಗೂಡಲು ಕರೆ ನೀಡಿ ಬಂಡವಾಳ ಶಾಹಿಗಳ ವಿರದ್ಧ ಕಾರ್ಮಿಕರನ್ನು ರಕ್ಷಿಸಿದಂತೆ ಹನ್ನೆರಡನೆಯ ಶತಮಾನದದಲ್ಲಿಯೇ ಶ್ರೇಣಿಕೃತ ಸಮಾಜದಲ್ಲಿ ಕಾಯಕ ಜೀವಿಗಳನ್ನು ರಕ್ಷಸಿದರು.
       ಸರ್ ಆರ್ಥರ್ ಮೈಲಾರ್ ಬಸವಣ್ಣನನ್ನು ಕರ್ನಾಟಕದ ಮಾರ್ಟನ್ ಲೂಥರ್ ಎಂದು ಕರೆದಿದ್ದಾರೆ ಮಾರ್ಟಿನ್ ಲೂಥರ್ ಹದಿನಾರನೆ ಶತಮಾನದಲ್ಲ್ಲಿ ಕ್ಯಾಥೊಲಿಕ್ ಚರ್ಚನ ವಿರುದ್ಧ ಬಂಡೆದ್ದು ಪ್ರೊಟೆಸ್ಟಂಟ ಪಂಥವನ್ನು ಸ್ಥಾಪಿಸಿದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೇ ವೈದಿಕ ಧರ್ಮದ ವಿರುದ್ಧ ಬಂಡೆದ್ದು ಲಿಂಗಾಯಿತ ಧರ್ಮ ಹುಟ್ಟು ಹಾಕಿದರು ಹಾಗಾಗಿ ಮಾರ್ಟನ್ ಲೂಥರರನ್ನು ಯೂರೋಪಿನ ಬಸವಣ್ಣ ಎಂದರೂ ತಪ್ಪಾಗಲಿಕ್ಕಿಲ್ಲ ಆ ಕಾರಣಕ್ಕಾಗಿ ಬಸವೇಶ್ವರರ ಮೂರ್ತಿಯನ್ನು ಥೇಮ್ಸ ನದಿ ದಡದಲ್ಲಿ ಸ್ಥಾಪಿಸಿ ಗೌರವಿಸಲಾಗಿದೆ ಬಸವೇಶ್ವರರು ವಿಸ್ವಗುರು ಅವರ ಜಯಂತ್ಯುತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಅವರ ತತ್ವ, ಸಿದ್ಧಾಂತಗಳು ಕಾರ್ಯ ರೂಪಕ್ಕೆ ಬಂದರೆ ಆಚರಣೆಗೂ ಒಂದು ಅರ್ಥ ಬಂದು ಸಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ .ಈ ವಿಚಾರ ಗಳನ್ನು ಹಂಚಿಕೊಳ್ಳುವ ಅವಕಾಶ ನೀಡಿ ನನ್ನನ್ನು ಗೌರವಿಸಿದ ಬಸವ ಕೇಂದ್ರದ ಸಂಘಟಿಕರಿಗೆ ಹೃದಯ ಪೂರ್ವಕ ಧನ್ಯವಾದಗಳು.

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...